ಲಂಡನ್: ವಿಶ್ವಕಪ್ ಟೂರ್ನಿ ಆರಂಭವಾಗಿ ಹದಿನೈದು ದಿನಗಳಾಗಿದ್ದರೂ ಕ್ರಿಕೆಟ್ ಫ್ಯಾನ್ಸ್ ಮಾತ್ರ ಭಾರತ - ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.
ಭಾರತ ತನ್ನ ಸಾಂಪ್ರದಾಯಿಕ ಎದುರಾಳಿಯನ್ನು ಇದೇ ಭಾನುವಾರ ಎದುರಿಸಲಿದ್ದು, ಇದಕ್ಕೂ ಮುಂಚಿತವಾಗಿ ಪಾಕ್ ನಾಯಕ ಸರ್ಫರಾಜ್ ಅಹ್ಮದ್, ಎಲ್ಲ ಆಟಗಾರರು ತಮ್ಮ ವಿಭಾಗಗಳಲ್ಲಿ ಮತ್ತಷ್ಟು ಪಕ್ವವಾಗಬೇಕು ಎಂದು ಖಡಕ್ಕಾಗಿ ಹೇಳಿದ್ದಾರೆ.
"ಮುಂದಿನ ದಿನದಲ್ಲಿ ಬಲಿಷ್ಠ ತಂಡ ಭಾರತವನ್ನು ಎದುರಿಸುತ್ತಿದ್ದೇವೆ. ನಮ್ಮ ಎದುರಾಳಿ ತಂಡ ಮೂರು ಮಾದರಿಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಹೀಗಾಗಿ ನಾವು ಎಲ್ಲ ವಿಭಾಗಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಬೇಕು" ಎಂದು ಪಾಕಿಸ್ತಾನ ನಾಯಕ ಹೇಳಿದ್ದಾರೆ.
ಮಿಂಚಿದ ವಾರ್ನರ್, ಕಮ್ಮಿನ್ಸ್... ಪಾಕ್ಗೆ ಸೋಲುಣಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಆಸೀಸ್
ನಮ್ಮ ಕ್ಷೇತ್ರರಕ್ಷಣೆ ವಿಭಾಗ ಅತ್ಯಂತ ದುರ್ಬಲವಾಗಿದೆ. ಭಾರತದ ವಿರುದ್ಧದ ಪಂದ್ಯದ ಗೆಲುವಿಗೆ ನಾವು ಕಠಿಣ ಶ್ರಮವಹಿಸುತ್ತಿರುವುದಾಗಿ ಸರ್ಫರಾಜ್ ಅಹ್ಮದ್ ಹೇಳಿದ್ದಾರೆ.
ಬುಧವಾರ ಆಸ್ಟ್ರೇಲಿಯಾ ವಿರುದ್ಧ 41 ರನ್ಗಳಿಂದ ಮುಗ್ಗರಿಸಿರುವ ಪಾಕಿಸ್ತಾನ ಟೂರ್ನಿಯಲ್ಲಿ ಎರಡನೇ ಸೋಲು ಕಂಡಿದೆ. ಆರಂಭಿಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶೋಚನೀಯ ಸೋಲುನುಭವಿಸಿತ್ತು. ಆತಿಥೇಯ ಇಂಗ್ಲೆಂಡ್ ವಿರುದ್ಧ ಮಾತ್ರ ಪಾಕ್ ಗೆಲುವು ಸಾಧಿಸಿದ್ದು, ಶ್ರೀಲಂಕಾ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿತ್ತು.
ಇತ್ತ ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ್ದರೆ ನಂತರದಲ್ಲಿ ಬಲಿಷ್ಠ ಆಸ್ಟ್ರೇಲಿಯಾಗೆ ಶಾಕ್ ನೀಡಿ ಟೂರ್ನಿಯ ನೆಚ್ಚಿನ ತಂಡ ಎನ್ನುವ ಮಾತನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಭಾರತ ಇಂದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ.