ಚಿಕ್ಕಮಗಳೂರು :ಬಾಲಕಾರ್ಮಿಕ ಪದ್ಧತಿ ಅಂತಾರಾಷ್ಟ್ರೀಯ ಮಟ್ಟದ ಸಾಮಾಜಿಕ ಪಿಡುಗಾಗಿದ್ದು, ಇದರ ನಿಯಂತ್ರಣ ಕೇವಲ ಕಾನೂನಿನಿಂದ ಮಾತ್ರ ಸಾಧ್ಯವಿಲ್ಲ. ಜೊತೆಗೆ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳ ನಡೆಸಿ ಅರಿವು ಮೂಡಿಸುವುದರೊಂದಿಗೆ ನಿಯಂತ್ರಸಲು ಮುಂದಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಉಮೇಶ್ ಎಂ.ಅಡಿಗ ಹೇಳಿದರು.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನವನ್ನು ಆಚರಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಅವರು, ಬಾಲಕಾರ್ಮಿಕತೆ ಅಂತರಾಷ್ಟ್ರೀಯ ಮಟ್ಟದ ದೊಡ್ಡ ಸಾಮಾಜಿಕ ಪಿಡುಗಾಗಿದ್ದು, ಇದಕ್ಕೆ ಕುಟುಂಬದಲ್ಲಿನ ಅಜ್ಞಾನ, ಬಡತನ, ಅನಕ್ಷರತೆ ಮೂಲ ಕಾರಣ. ಹಾಗಾಗಿ ಇದರ ನಿಯಂತ್ರಣ ಕೇವಲ ಕಾನೂನಿನಿಂದ ಕಷ್ಟಸಾಧ್ಯ. ಬದಲಾಗಿ ಹೆಚ್ಚಾಗಿ ಜನ ಜಾಗೃತಿ ಕಾರ್ಯಕ್ರಮಗಳು ನಡೆದಾಗ ನಿಯಂತ್ರಿಸಲು ಸಾಧ್ಯವಾಗಲಿದೆ ಎಂದರು.
ಪ್ರಪಂಚದಾದ್ಯಂತ ಸುಮಾರು 153 ಮಿಲಿಯನ್‌ನಷ್ಟು ಮಕ್ಕಳು ಬಾಲ ಕಾರ್ಮಿಕರಾಗಿ ವಿವಿಧ ಕಡೆಗಳಲ್ಲಿ ದುಡಿಯುತ್ತಿದ್ದಾರೆ. ಅದರಲ್ಲಿ ಶೇ. 50 ರಷ್ಟು ಮಕ್ಕಳು ಅಪಾಯಕಾರಿ ಕೆಲಸಗಳಲ್ಲಿ ದುಡಿಯುತ್ತಿದ್ದು, ಈ ಬಗ್ಗೆ ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ಮೂಲಕ ನಿಯಂತ್ರಣಕ್ಕೆ ಮುಂದಾಗಿದೆ. ಪ್ರತಿ ಜೂನ್ 12ನ್ನು ಪ್ರಪಂಚದಾದ್ಯಂತ ವಿಶ್ವ ಬಾಲಕಾರ್ಮಿಕ ವಿರೋಧಿ ದಿನವನ್ನಾಗಿ ಆಚರಿಸುವ ಮೂಲಕ ಬಾಲ ಕಾರ್ಮಿಕತೆಯ ಸಂಪೂರ್ಣ ನಿಯಂತ್ರಣಕ್ಕೆ ಮುಂದಾಗಿದೆ.
ಬಾಲ ಕಾರ್ಮಿಕತೆಯು ಕೇವಲ ಭಾರತ ಮಾತ್ರವಲ್ಲದೇ ಅಭಿವೃದ್ದಿ ಹೊಂದಿದ ಹಾಗೂ ಹೊಂದುತ್ತಿರುವ ರಾಷ್ಟ್ರಗಳಲ್ಲಿಯೂ ಹೆಚ್ಚಾಗುತ್ತಿದೆ. ಈ ಬಗ್ಗೆ ವಿಶ್ವ ಕಾರ್ಮಿಕ ಸಂಘಟನೆಯು 2002ರಿಂದ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಇಂತಹ ಕಾರ್ಯಕ್ರಮಗಳು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ, ಪ್ರತಿದಿನವು ನಡೆಯುವಂತಾಗಬೇಕು. ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳ ವಿದ್ಯಾಬ್ಯಾಸಕ್ಕೆ ಹೆಚ್ಚಿನ ಗಮನ ನೀಡದೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಈ ಬಗ್ಗೆ ಅಧಿಕಾರಿಗಳು, ಶಾಲಾ-ಕಾಲೇಜುಗಳ ಮೂಲಕ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.