ಬೆಂಗಳೂರು :ಕೋವಿಡ್ ಸೋಂಕಿತರು ಸಾಲುಸಾಲಾಗಿ ಸಾವನ್ನಪ್ಪುತ್ತಿರುವ ಸಂದರ್ಭದಲ್ಲಿ ರಾಜ್ಯಕ್ಕೆ ಅಗತ್ಯ ಪ್ರಮಾಣದಲ್ಲಿ ಆಕ್ಸಿಜನ್ ಪೂರೈಸುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿರುವುದು ಮಲತಾಯಿ ಧೋರಣೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯಕ್ಕೆ 1200 ಟನ್ ಆ್ಯಕ್ಸಿಜನ್ ನೀಡಬೇಕೆಂದು ರಾಜ್ಯ ಉಚ್ಛ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಈ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿರುವುದು ಖಂಡನೀಯ. ಕೇಂದ್ರ ಸರ್ಕಾರದ ಈ ಮಲತಾಯಿ ಧೋರಣೆಗೆ ಕನ್ನಡಿಗರ ಧಿಕ್ಕಾರವಿರಲಿದೆ ಎಂದು ಜೆಡಿಎಸ್ ಮುಖಂಡರೂ ಆಗಿರುವ ವಕೀಲ ಎ.ಪಿ. ರಂಗನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆಯಷ್ಟೇ(ಮೇ.5)ರಂದು ಹೈಕೋರ್ಟ್ ರಾಜ್ಯಕ್ಕೆ 1200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಚಾಮರಾಜನಗರ, ಕಲಬುರಗಿಯಲ್ಲಿ ಕೋವಿಡ್ ಸೋಂಕಿತ ರೋಗಿಗಳಿಗೆ ಆಕ್ಸಿಜನ್ ಲಭ್ಯವಾಗದೆ ಸಾವನ್ನಪ್ಪಿದ ಪ್ರಕರಣಗಳೂ ಸೇರಿದಂತೆ ರಾಜ್ಯದ ಹಲವೆಡೆ ಆಮ್ಲಜನಕ ಕೊರತೆಯಿದಾಗಿಯೇ ರೋಗಿಗಳು ಮೃತಪಡುತ್ತಿರುವ ವಿಚಾರವಾಗಿ ಹೈಕೋರ್ಟ್ ತೀವ್ರ ಆತಂಕ ವ್ಯಕ್ತಪಡಿಸಿತ್ತು.
ಇದೇ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ರಾಜ್ಯಕ್ಕೆ ನಿತ್ಯವೂ 1700 ಮೆಟ್ರಿಕ್ ಟನ್ ಆ್ಯಕ್ಸಿಜನ್ ಅಗತ್ಯವಿದೆ ಎಂದಿದ್ದರು. ಕೇಂದ್ರ ಸರ್ಕಾರ 965 ಮೆ. ಟನ್ ಆಕ್ಸಿಜನ್ ಪೂರೈಸುವುದಾಗಿ ತಿಳಿಸಿತ್ತು. ಇದನ್ನೊಪ್ಪದ ಹೈಕೋರ್ಟ್ ರಾಜ್ಯದಲ್ಲಿ ಬೇರೆಡೆಗಿಂತ ಅತ್ಯಂತ ಕಠಿಣ ಪರಿಸ್ಥಿತಿ ಇದೆ.
ಹೀಗಾಗಿ ರಾಜ್ಯಕ್ಕೆ 1700 ಟನ್ ಬೇಕಿದ್ದು, ಕನಿಷ್ಠ 1200 ಟನ್ ಆದರೂ ಪೂರೈಸಬೇಕು ಎಂದು ನಿರ್ದೇಶಿಸಿತ್ತು. ಇದೀಗ ಈ ಆದೇಶ ಪ್ರಶ್ನಿಸಿ ಕೇಂದ್ರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ ಎಂದು ಎ.ಪಿ. ರಂಗನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.