ನವದೆಹಲಿ: ಜೂನ್ ತಿಂಗಳ ಮಧ್ಯಭಾಗದಲ್ಲಿದ್ದರೂ ದೇಶದ ಹಲವೆಡೆ ತಾಪಮಾನ ಏರುಗತಿಯಲ್ಲೇ ಸಾಗುತ್ತಿದ್ದು ಪರಿಣಾಮ ಜನತೆ ಬಿಸಿಲಿನ ತಾಪಕ್ಕೆ ಕಂಗೆಟ್ಟು ಹೋಗಿದ್ದಾರೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಉಷ್ಣಾಂಶ ಹಾಗೂ ಬಿಸಿಗಾಳಿ ಇಷ್ಟೊಂದು ಪ್ರಮಾಣದಲ್ಲಿ ದಾಖಲಾಗಿದ್ದು ಮಳೆಗಾಗಿ ಕಾತರಿಸುವಂತೆ ಮಾಡಿದೆ. ಕಳೆದ ವಾರ ರಾಜಸ್ಥಾನದ ಚುರುವಿನಲ್ಲಿ 50 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು ದೇಶದಲ್ಲೇ ಗರಿಷ್ಠವಾಗಿತ್ತು.
ಸೋಮವಾರ ಉತ್ತರ ಪ್ರದೇಶದ ಬಂದಾ( 49.2 ಡಿಗ್ರಿ), ಅಲಹಾಬಾದ್(48.9 ಡಿಗ್ರಿ) ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 48 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಬಿಸಿಗಾಳಿಯ ಪರಿಣಾಮ ಇನ್ನೂ ಎರಡು ದಿನ ಹಲವೆಡೆ ಉಷ್ಣಾಂಶ 45 ಡಿಗ್ರಿ ಇರಲಿದೆ.
ತೀವ್ರ ತಾಪಮಾನದ ಪರಿಣಾಮ ಮಂಗಳವಾರದಂದು ಉತ್ತರ ಪ್ರದೇಶದ ಝಾನ್ಸಿಯಲ್ಲಿ ಸಾಗುತ್ತಿದ್ದ ಕೇರಳ ಎಕ್ಸ್ಪ್ರೆಸ್ನಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.
2010ರಿಂದ ಇಲ್ಲಿಯವರೆಗೆ ತಾಪಮಾನ ಹೆಚ್ಚಳಕ್ಕೆ ಬರೋಬ್ಬರಿ ಆರು ಸಾವಿರ ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.