ಕರ್ನಾಟಕ

karnataka

ETV Bharat / briefs

ಲೋಕಸಮರದಲ್ಲಿ ಅರಳಿದ ಕಮಲ ಲೋಕಲ್​ ಸಮರದಲ್ಲಿ ಮುದುಡಿದ್ದೇಕೆ? - undefined

ಮೈತ್ರಿ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದರೂ ಅವರ ವಿರುದ್ಧ ಮೇಲುಗೈ ಸಾಧಿಸುವಲ್ಲಿ ಕೇಸರಿ ಪಡೆ ವಿಫಲವಾಗಿದೆ. ಪಟ್ಟಣ ಪಂಚಾಯತ್​ನಲ್ಲಿ ಹೆಚ್ಚಿನ ಸ್ಥಾನಗಳಿಸಿದ್ದರೂ ನಗರಸಭೆ ಹಾಗೂ ಪುರಸಭೆಯಲ್ಲಿ ಸೋಲನುಭವಿಸಿದೆ.

ಬಿಜೆಪಿ , ಕಾಂಗ್ರೆಸ್, ಜೆಡಿಎಸ್

By

Published : Jun 1, 2019, 8:55 AM IST

ಬೆಂಗಳೂರು : ಲೋಕಸಮರದಲ್ಲಿ ಭರ್ಜರಿ ಜಯಗಳಿಸಿದ್ದ ಬಿಜೆಪಿ ಲೋಕಲ್​ವಾರ್​ನಲ್ಲಿ ಎಡವಿದೆ. ಮೈತ್ರಿ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದರೂ ಅವರ ವಿರುದ್ಧ ಮೇಲುಗೈ ಸಾಧಿಸುವಲ್ಲಿ ಕೇಸರಿ ಪಡೆ ವಿಫಲವಾಗಿದೆ. ಪಟ್ಟಣ ಪಂಚಾಯತ್​ನಲ್ಲಿ ಹೆಚ್ಚಿನ ಸ್ಥಾನಗಳಿಸಿದ್ದರೂ ನಗರಸಭೆ ಹಾಗೂ ಪುರಸಭೆಯಲ್ಲಿ ಸೋಲನುಭವಿಸಿದೆ.

ವಿಧಾನಸಭಾ ಚುನಾವಣೆ ನಡೆದು ಸರಿಯಾಗಿ ಒಂದು ವರ್ಷದ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿ 28 ರಲ್ಲಿ 25 ಸ್ಥಾನ ಗೆದ್ದು ಬೀಗಿದ್ದ ಬಿಜೆಪಿ, ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ.

7 ನಗರಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 2 ನಗರಸಭೆಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, 5 ಕಡೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಮತ್ತು ಜೆಡಿಎಸ್​ಗೆ ಒಂದೂ ನಗರಸಭೆ ಗೆಲ್ಲಲು ಸಾಧ್ಯವಾಗಿಲ್ಲ.

ಅದೇ ರೀತಿ ರಾಜ್ಯದ 30 ಪುರಸಭೆ ಚುನಾವಣೆಯಲ್ಲಿ 6 ಬಿಜೆಪಿ, 12 ಕಾಂಗ್ರೆಸ್, 2 ಜೆಡಿಎಸ್ ಪಾಲಾಗಿದ್ದು, 10 ಕಡೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದ 19 ಪಟ್ಟಣ ಪಂಚಾಯತ್​ಗೆ ಚುನಾವಣೆ ನಡೆದಿದ್ದು, ಇದರಲ್ಲಿ 8 ಬಿಜೆಪಿ, 3 ಕಾಂಗ್ರೆಸ್ ಪಾಲಾಗಿದ್ದು, 8 ಕಡೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಜೆಡಿಎಸ್ ಒಂದೂ ಪಟ್ಟಣ ಪಂಚಾಯತ್ ಗೆದ್ದಿಲ್ಲ. ಇಲ್ಲಿ ಮಾತ್ರ ಬಿಜೆಪಿ‌ ಮುನ್ನಡೆ ಸಾಧಿಸಿದೆ.

ಒಂದು ವರ್ಷದ ಹಿಂದಷ್ಟೇ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ‌ 104 ಸ್ಥಾನಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು ಸರಿಯಾಗಿ ವರ್ಷದ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ 27 ರಲ್ಲಿ ಕೇವಲ ಎರಡರಲ್ಲಿ ಮಾತ್ರ ಸೋತು 25 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದ್ದು, ಈ ಚುನಾವಣೆ ನಂತರ ಕೆಲ ದಿನಗಳಲ್ಲೇ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಾತ್ರ ನೆಲಕಚ್ಚಿದೆ.

ಸಾಮಾನ್ಯವಾಗಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಆಡಳಿತಾರೂಢ ಪಕ್ಷದ ಪರವಾಗಿ ಫಲಿತಾಂಶ ಬರುತ್ತದೆ. ಅದೇ ರೀತಿ ಈಗಲೂ ಆಗಿದೆ. ಆದರೆ, ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದ್ದರೂ ಕೂಡ ಮೈತ್ರಿ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದರಿಂದ‌ ಬಿಜೆಪಿಗೆ ಹೆಚ್ಚಿನ ಲಾಭವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆ ನಿರೀಕ್ಷೆ ಹುಸಿಯಾಗಿದೆ. ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡಿದೆ. ಜೆಡಿಎಸ್​ನ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗಿದ್ದರೂ ಲೋಕಲ್​ವಾರ್ ನಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆದ್ದು ಬೀಗುತ್ತಿದೆ.

ಮತ್ತೊಂದು ಅಂಶವೆಂದರೆ ಸ್ಥಳೀಯ ಸಂಸ್ಥೆಗಳ ಚುನಾವಣೆ, ರಾಜ್ಯ ಹಾಗೂ ರಾಷ್ಟ್ರದ ವಿಚಾರದ ಆಧಾರದಲ್ಲಿ ನಡೆಯದೇ ಸ್ಥಳೀಯ ಸಮಸ್ಯೆಗಳು, ವಿಚಾರಗಳ ಆಧಾರದಲ್ಲಿ ನಡೆಯುತ್ತವೆ. ಹಾಗಾಗಿ ಇಲ್ಲಿ ಲೋಕಸಭಾ ಚುನಾವಣಾ ಫಲಿತಾಂಶ, ವಿಧಾನಸಭಾ ಚುನಾವಣಾ ಫಕಿತಾಂಶಕ್ಕಿಂತ ಭಿನ್ನವಾಗಿ ಬಂದಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಲೋಕಸಭಾ ಚುನಾವಣಾ ಪ್ರಚಾರಕ್ಕೆ ಹೆಚ್ಚಿನ ಸಮಯ ನೀಡಿದ್ದ ಬಿಜೆಪಿ ನಾಯಕರು ನಗರ, ಸ್ಥಳೀಯ ಸಂಸ್ಥೆ ಚುನಾವಣಾ ಪ್ರಚಾರಕ್ಕೆ ಅಷ್ಟು ಸಮಯ ನೀಡಲಿಲ್ಲ. ಪ್ರಚಾರದಲ್ಲಿ ಅಲ್ಪ ಪ್ರಮಾಣದಲ್ಲಿ‌ ಹಿಂದೆ ಬಿದ್ದಿದ್ದು, ಸ್ಥಳೀಯ ವಿಚಾರಗಳನ್ನು ಸಮರ್ಥವಾಗಿ ಜನರ ಮುಂದಿಡುವಲ್ಲಿ ಎಡವಿದ್ದರಿಂದ‌ ಬಿಜೆಪಿಗೆ ಈ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಂದಿಲ್ಲ ಎನ್ನಲಾಗಿದೆ.

ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ನಲ್ಲಿ ಹೆಚ್ಚಿನ ಕಡೆ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು ಅಲ್ಲಿ ಯಾವ ರೀತಿಯ ಮೈತ್ರಿ ಆಗಲಿದೆ‌ ಬಿಜೆಪಿಗೆ ಅವಕಾಶ ಸಿಗುತ್ತಾ ಕಾದು ನೋಡಬೇಕಿದೆ.

For All Latest Updates

TAGGED:

ABOUT THE AUTHOR

...view details