ಲಂಡನ್: ಪ್ರಸಕ್ತ ಸಾಲಿನ ಐಸಿಸಿ ಏಕದಿನ ಟೂರ್ನಿ ಆರಂಭಗೊಳ್ಳಲು ಕೇವಲ ಐದು ದಿನಗಳು ಮಾತ್ರ ಬಾಕಿ ಉಳಿದಿವೆ. ಇದರ ಮಧ್ಯೆ 10 ತಂಡದ ನಾಯಕರಿಗೆ ಈ ಸಲದ ಟ್ರೋಫಿ ಯಾರು ಗೆಲ್ಲಲಿದ್ದಾರೆಂದು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಈ ಸಲದ ಐಸಿಸಿ ವಿಶ್ವಕಪ್ ಗೆಲ್ಲುವುದು ಯಾರು? ಎಂದು ಕೇಳಿರುವ ಪ್ರಶ್ನೆಗೆ 10 ತಂಡದ ನಾಯಕರು ಉತ್ತರ ನೀಡಿದ್ದು, ಯಾರು ಏನ್ ಹೇಳಿದ್ದಾರೆ ನೀವೂ ಕೇಳಿ.
ಆ್ಯರೋನ್ ಫಿಂಚ್: ಆಸ್ಟ್ರೇಲಿಯಾ ಕ್ಯಾಪ್ಟನ್
ಕಳೆದ ಕೆಲ ವರ್ಷಗಳಿಂದ ಇಂಗ್ಲೆಂಡ್ ಹಾಗೂ ಭಾರತ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಈ ಸಲದ ವಿಶ್ವಕಪ್ನಲ್ಲಿ ಅವೇ ಫೆವರೆಟ್ ತಂಡಗಳಾಗಲಿದ್ದು, ನನ್ನ ಪ್ರಕಾರ ಇಂಗ್ಲೆಂಡ್ ವಿಶ್ವಕಪ್ ಗೆಲ್ಲುವ ಚಾನ್ಸ್ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ತಂಡ ಸೇರಿಕೊಂಡಿರುವ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಅವರನ್ನ ವೆಲ್ಕಮ್ ಮಾಡಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ: ಟೀಂ ಇಂಡಿಯಾ ಕ್ಯಾಪ್ಟನ್
ತವರು ನೆಲದ ಪ್ರಯೋಜನೆ ಪಡೆದುಕೊಳ್ಳುವ ಇಂಗ್ಲೆಂಡ್ ಈ ಸಲದ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಲಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ನಮಗೂ ವಿಶ್ವದ ತುಂಬೆಲ್ಲ ಅತಿ ಹೆಚ್ಚು ಕ್ರೀಡಾಭಿಮಾನಿಗಳಿದ್ದಾರೆ. ಆದರೆ, ಇಂಗ್ಲೆಂಡ್ ತಂಡ ಕಳೆದ ಕೆಲ ವರ್ಷಗಳಿಂದ ಉತ್ತಮ ಕ್ರಿಕೆಟ್ ಆಡುತ್ತಿದೆ ಎಂದು ತಿಳಿಸಿದ್ದಾರೆ. ಈ ಸಲದ ವಿಶ್ವಕಪ್ ಹೆಚ್ಚು ಸ್ಪರ್ಧಾತ್ಮಕವಾಗಿರುತ್ತದೆ ಎಂದಿದ್ದಾರೆ.
ಇಯಾನ್ ಮಾರ್ಗನ್: ಇಂಗ್ಲೆಂಡ್ ಕ್ಯಾಪ್ಟನ್
ಈ ಸಲದ ವಿಶ್ವಕಪ್ನಲ್ಲಿ ಅತಿ ಸ್ಪರ್ಧಾತ್ಮಕ ಕ್ರಿಕೆಟ್ ಮೂಡಿ ಬರಲಿದ್ದು, ಯಾವುದೇ ಒಂದೇ ತಂಡ ಬಲಿಷ್ಠ ಎಂದು ಹೇಳುವುದು ಅಸಾಧ್ಯ. ಪ್ರತಿ ತಂಡದ ಕ್ಯಾಪ್ಟನ್ ಕೂಡ ಅದ್ಭುತ ಕ್ರಿಕೆಟ್ ಆಡುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದು, ಎಲ್ಲರಿಂದಲೂ ಅದ್ಭುತ ಸ್ಪರ್ಧೆ ಏರ್ಪಡಲಿದೆ ಎಂದಿದ್ದಾರೆ.
ಫಾಫು ಡುಪ್ಲೆಸಿಸ್:ದಕ್ಷಿಣ ಆಫ್ರಿಕಾ ಕ್ಯಾಪ್ಟನ್
ಹೊಸ ಟೂರ್ನಾಮೆಂಟ್ ಆಡಲು ನಾವು ಸಿದ್ಧರಾಗಿದ್ದು, ಎಲ್ಲರೂ ಗ್ರೇಟ್ ಕ್ರಿಕೆಟ್ ಆಡುವ ಉತ್ಸಾಹದಲ್ಲಿದ್ದಾರೆ. ಪ್ರತಿಯೊಂದು ತಂಡದಲ್ಲೂ ಅದ್ಭುತ ಪ್ರತಿಭೆಗಳಿದ್ದಾರೆ. ಅದರಿಂದಲೇ ಯಶಸ್ಸು ಕಾಣಲಿದ್ದು, ಬೌಲಿಂಗ್ ವಿಭಾಗದಿಂದಲೇ ಈ ಸಲದ ವಿಶ್ವಕಪ್ ಗೆಲ್ಲಬಹುದು ಎಂದು ತಿಳಿಸಿದ್ದಾರೆ.
ಸರ್ಫರಾಜ್ ಅಹ್ಮದ್: ಪಾಕಿಸ್ತಾನ ಕ್ಯಾಪ್ಟನ್
ಈ ಹಿಂದೆ ಇಂಗ್ಲೆಂಡ್ನಲ್ಲಿ ನಡೆದ ಟೂರ್ನಿಗಳಲ್ಲಿ ನಮ್ಮ ತಂಡ ಅದ್ಭುತ ಪ್ರದರ್ಶನ ನೀಡಿದ್ದು, ಈ ಸಲವೂ ನಮ್ಮ ತಂಡ ಚಾಂಪಿಯನ್ ಆಗುವ ವಿಶ್ವಾಸವಿದೆ ಎಂದಿದ್ದಾರೆ. ಈ ಹಿಂದೆ 2017ರ ಚಾಂಪಿಯನ್ ಟ್ರೋಫಿಯಲ್ಲೂ ನಾವು ವಿನ್ ಆಗಿದ್ದು, ಅದೇ ರೀತಿ ಈ ಸಲವೂ ನಮ್ಮ ತಂಡದಿಂದ ಉತ್ತಮ ಆಟ ಪ್ರದರ್ಶನವಾಗಲಿದೆ ಎಂದಿದ್ದಾರೆ.