ಮಂಡ್ಯ: ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ತಾವು ಕಾಂಗ್ರೆಸ್ ನಾಯಕರ ಮನೆ ಬಾಗಲಿಗೆ ಹೋಗಲು ಸಿದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಹೇಳಿದರು.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದೇನೆ. ನಿಖಿಲ್ ಗೆಲ್ಲಿಸುವ ಹೊಣೆ ನನ್ನ ಮೇಲಿದ್ದು, ಕೈ ನಾಯಕರ ಮನೆ ಬಾಗಿಲಿಗೆ ಹೋಗಿ ಬೆಂಬಲ ಕೋರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಮಾತನಾಡಿದ ಅವರು ನಿಖಿಲ್ಕುಮಾರಸ್ವಾಮಿ 2 ಲಕ್ಷ ಕಾರ್ಯಕರ್ತರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಬೆಳಗ್ಗೆ ಕಾಳಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ಘೋಷಿಸಿದರು.
ಎಲ್ಲವೂ ಸರಿಯಿಲ್ಲ:
ಇಂದು ನಡೆದ ಜಂಟಿಗೋಷ್ಠಿಗೆ ಮಾಜಿ ಶಾಸಕರಾದ ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ ಸೇರಿದಂತೆ ಕಾಂಗ್ರೆಸ್ನ ಮಾಜಿ ಶಾಸಕರು ಭಾಗವಹಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಕೆಲವೇ ಕೆಲವು ಮುಖಂಡರು ಭಾಗವಹಿಸಿದ್ದು, ಇನ್ನೂ ದೋಸ್ತಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಯಿತು.
ಕಾರ್ಯಕರ್ತರು ಟೀಕೆ ಮಾಡದಂತೆ ಮನವಿ:
ಚುನಾವಣೆ ವಿಚಾರವಾಗಿ ನಟ ನಟಿಯರು ಸೇರಿದಂತೆ ಯಾವುದೇ ವ್ಯಕ್ತಿ, ಕಾರ್ಯಕರ್ತರಲಾಗಲೀ, ಮುಖಂಡರಾಗಲಿ ಟೀಕೆ ಮಾಡಬಾರದು. ಈ ಬಗ್ಗೆ ವರಿಷ್ಠರೇ ಸೂಚನೆ ನೀಡಿದ್ದಾರೆ ಎಂದು ಎಚ್ಚರಿಕೆ ನೀಡಿದರು. ನಿಖಿಲ್ ಮಾತನಾಡಿ, ಎಲ್ಲಾ ಕಡೆಯೂ ಉತ್ತಮ ಸ್ಪಂದನೆ ಸಿಗುತ್ತಿದೆ. 25 ರಂದು ನಮ್ಮ ಕಾರ್ಯಕರ್ತರು ಹೇಗೆ ಬರುತ್ತಾರೆ ನೋಡಿ ಎಂದು ಸವಾಲೆಸೆದರು.
ನಮಗೆ ಸೋಷಿಯಲ್ ಮೀಡಿಯಾ ಗೊತ್ತಿಲ್ಲ:
ನಮಗೆ ನೇಗಿಲು, ಕುಳ, ದನ ಇಷ್ಟೇ ಗೊತ್ತಿರುವುದು. ನನಗೆ ಸೋಷಿಯಲ್ ಮೀಡಿಯಾ ಗೊತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಆಗಿಲ್ಲವಾ ಎಂದು ಹೇಳಿದ ಸಚಿವ ಪುಟ್ಟರಾಜು, ನ್ಯಾಷನಲ್ ಫಿಗರ್ ಗಳು ಉಪಯೋಗಿಸ್ತಾರೆ. ಮೋದಿ ಉಪಯೋಗಿಸುತ್ತಾರೆ ಎಂದು ಹೇಳಿದರು. ಸಮಾವೇಶದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನೀವು ಹೇಳಿದಂತೆ ಕೇಳುತ್ತೇವೆ ಅಂತ ಪತ್ರಕರ್ತರ ಪ್ರಶ‍್ನೆಗೆ ಸಮಜಾಯಿಸಿ ನೀಡಿದರು. ಜೊತೆಗೆ ರಸ್ತೆಯಲ್ಲೇ ನಿಂತು ಸಿಎಂ ಕಾರ್ಯಕರ್ತರ ಕುರಿತು ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.
ಜಂಟಿ ಗೋಷ್ಠಿಯಲ್ಲಿ ಕಾಣಿಸಿಕೊಂಡ ಅಂಬಿ ಆಪ್ತ:
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಂಬರೀಶ್ ಪರಮಾಪ್ತ ಎನಿಸಿಕೊಂಡಿದ್ದ ಅಮರಾವತಿ ಚಂದ್ರಶೇಖರ್ ಕಾಣಿಸಿಕೊಂಡರು. ಜೊತೆಗೆ ಎಪಿಎಂಸಿ ಅಧ್ಯಕ್ಷರಾಗಿದ್ದ ಪಲ್ಲವಿಯೂ ಮೈತ್ರಿ ಜೊತೆ ಗುರುತಿಸಿಕೊಂಡಿದ್ದು ಕುತೂಹಲ ಮೂಡಿಸಿತು.