ದಾವಣಗೆರೆ: ಭೀಕರ ಬರಗಾಲದಿಂದ ತತ್ತರಿಸಿರುವ ಜಿಲ್ಲೆಯ ಜಗಳೂರು ತಾಲೂಕಿನಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಜನರಂತೂ ನೀರು ಸಿಗದೇ ಪರದಾಡುತ್ತಿದ್ದಾರೆ. ಸೊಕ್ಕೆ ಗ್ರಾಮಸ್ಥರ ಸ್ಥಿತಿಯಂತೂ ಹೇಳತೀರದು. ನಾಲ್ಕು ದಿನಕ್ಕೊಮ್ಮೆ ಎಂಟು ಬಿಂದಿಗೆ ನೀರುಮಾತ್ರ ಪೂರೈಸಲಾಗುತ್ತಿದೆ.
ಸೊಕ್ಕೆ ಸುತ್ತಮುತ್ತಲಿನ 8 ಕಿಲೋಮೀಟರ್ ವ್ಯಾಪ್ತಿಯಲ್ಲಿ ಅಂತರ್ಜಲ ಸಂಪೂರ್ಣ ಕುಸಿದಿದೆ. ಸೊಕ್ಕೆ ಗ್ರಾಮ ಪಂಚಾಯತ್ ವತಿಯಿಂದ ಹಲವೆಡೆ ಬೋರ್ವೆಲ್ಗಳನ್ನು ಕೊರೆಸಲಾಗಿದ್ರೂ ನೀರು ಮಾತ್ರ ಸಿಗುತ್ತಿಲ್ಲ. 1200 ಅಡಿ ಆಳಕ್ಕೆ ಕೊರೆಸಿದ್ರೂ ನೀರಿನ ಸೆಲೆ ಸಿಗ್ತಿಲ್ಲ.ನೀರು ಬಿಡುವ ದಿನ ಬೆಳಗ್ಗೆ 6 ರಿಂದ 10ಗಂಟೆಯೊಳಗೆ ಇದ್ರೇ ಸಿಗುತ್ತೆ. 4 ಗಂಟೆಗಳ ಕಾಲ ಕಾದು ನೀರು ಹಿಡಿದುಕೊಳ್ಳಬೇಕು. ಇಲ್ಲದಿದ್ರೇ ಮತ್ತೆ ನಾಲ್ಕುದಿನ ಕಾಲ ಕಾಯಬೇಕಾದ ಸ್ಥಿತಿಯಿದೆ. ಕೇವಲ 8 ಕೊಡ ನೀರು 4 ದಿನಕ್ಕೊಮ್ಮೆ ಸಿಗುತ್ತಿರುವುದರಿಂದ ಜಾನುವಾರುಗಳ ಸ್ಥಿತಿಯಂತೂ ಹೇಳತೀರದಾಗಿದೆ ಎನ್ನುತ್ತಾರೆ ಗ್ರಾಮದ ಅಂಜಿನಪ್ಪ.