ಪ್ರಾಗ್(ಜೆಕ್ ಗಣರಾಜ್ಯ):ವಿಶ್ವ ಕಂಡ ಶ್ರೇಷ್ಠ ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಬಹುಕಾಲದ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಸಚಿನ್ ತೆಂಡೂಲ್ಕರ್ ಕಾರು ಪ್ರಿಯ ಎಂಬುದು ಎಲ್ಲರಿಗೂ ತಿಳಿದ ವಿಷಯ. ಅವರ ಬಳಿ ಫೆರಾರಿ ಸಹಿತ ಬಿಎಂಡಬ್ಲ್ಯೂ, ಮರ್ಸಿಡೀಸ್ ಬೆಂಜ್, ನಿಸಾನ್ ಜಿಟಿ-ಆರ್, ಮಾರುತಿ 800, ಆಡಿ ಸೇರಿದಂತೆ ಹತ್ತಾರು ಕಾರುಗಳಿವೆ.
ಫೆರಾರಿ ಕಾರನ್ನು ರಾತ್ರಿ ವೇಳೆ ಖಾಲಿ ರಸ್ತೆಯಲ್ಲಿ ವೇಗವಾಗಿ ಒಡಿಸುವ ಮೂಲಕ ತಮ್ಮ ಆಸೆ ತೀರಿಸಿಕೊಳ್ಳುತ್ತಿದ್ದ ಸಚಿನ್ ನಿನ್ನೆ ಜೆಕ್ ಗಣರಾಜ್ಯದ ಫಾರ್ಮುಲ್ ರೇಸ್ ಕಾರನ್ನು ಸ್ವತಃ ರೇಸ್ ಮೈದಾನದಲ್ಲಿ ಓಡಿಸುವ ಮೂಲಕ ತಮ್ಮ ಬಹುದಿನಗಳ ಕನಸನ್ನು ಈಡೇರಿಸಿಕೊಂಡಿದ್ದಾರೆ.
ಜೆಕ್ ಗಣರಾಜ್ಯದ ರಾಜಧಾನಿ ಪ್ರಾಗ್ನಲ್ಲಿ ಅಪೋಲೋ ಟೈಯರ್ಸ್ ಕಂಪನಿಯ ಪ್ರಮೋಷನ್ ಕ್ಯಾಂಪೇನ್ನಲ್ಲಿ ಭಾಗವಹಿಸಿದ್ದ ಸಚಿನ್ ಫಾರ್ಮುಲಾ 1 ಕಾರನ್ನು ರೇಸ್ ಟ್ರ್ಯಾಕ್ನಲ್ಲೇ ಚಾಲನೆ ಮಾಡಿದ್ದಾರೆ. ಈ ವಿಡೀಯೋವನ್ನು ಸ್ವತಃ ಸಚಿನ್ ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಈ ಅವಕಾಶ ನೀಡಿದ ಅಪೋಲಾ ಟೈಯರ್ಸ್ಗೆ ಧನ್ಯವಾದ ತಿಳಿಸಿದ್ದಾರೆ. ಫಾರ್ಮುಲಾ ಕಾರ್ ಚಾಲನೆ ತುಂಬಾ ಮಜವಾಗಿತ್ತು ಎಂದು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.