ವಾರಣಾಸಿ:ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲು ಮಾಡಿದ ಬಳಿಕ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಸ್ವಕ್ಷೇತ್ರ ವಾರಣಾಸಿಗೆ ಆಗಮಿಸಿದ್ದು, ಕಾಲಬೈರವೇಶ್ವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಗಂಗೆಯ ಬೀಡು, ದೇಗುಲ ನಗರಿ, ಸ್ವಕ್ಷೇತ್ರ ವಾರಾಣಸಿಯಲ್ಲಿ ನಮೋ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ದೇವನಗರಿ ಎಂದು ಬಿಂಬಿತವಾಗಿರುವ ವಾರಾಣಸಿಯಲ್ಲಿ ಈ ಹಿಂದೆ ನಾಮಪತ್ರ ಸಲ್ಲಿಕೆಗೂ ಮುನ್ನ ಭರ್ಜರಿ ಮತಭೇಟಿ ನಡೆಸಿ ಹೋಗಿದ್ದ ಮೋದಿ, ಇದೀಗ ಕಾಲಭೈರವನ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಕಾಶಿ ವಿಶ್ವನಾಥನ ಪೂಜೆಯಲ್ಲಿ ನಮೋ ಭಾಗಿ ವಿಶೇಷ ವಿಮಾನದ ಮೂಲಕ ಆಗಮಿಸಿದ ಅವರನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬರಮಾಡಿಕೊಂಡರು. ಅದಾದ ಬಳಿಕ ಕಾಶಿ ವಿಶ್ವನಾಥನ ದೇವಾಲಯಕ್ಕೆ ತೆರಳಿದರು. ಈ ವೇಳೆ ರಸ್ತೆ ಉದ್ದಕ್ಕೂ ನೆರೆದಿದ್ದ ಜನರತ್ತ ಮೋದಿ ಕೈ ಬೀಸಿದರು.
ವಿಶೇಷ ಪೂಜೆಯಲ್ಲಿ ಭಾಗಿ
ಕಾಶಿ ವಿಶ್ವನಾಥನ ಸನ್ನಿಧಿಗೆ ಆಗಮಿಸಿದ ಮೋದಿ ವಿಶೇಷ ಪೂಜೆಯಲ್ಲಿ ಭಾಗಿಯಾದರು. ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ ಮೋದಿ, ಹಾಲು, ಸಕ್ಕರೆ, ಮೊಸರು, ಜೇನು, ಬಾಳೆಹಣ್ಣುಗಳಿಂದ ಪಂಚಾಭಿಷೇಕ ಮಾಡಿ, ಬಿಲ್ವಪತ್ರೆಯಿಂದ ಪೂಜೆ ಸಲ್ಲಿಸಿದರು.