ಮಂಡ್ಯ: ಪುರಾಣ ಪ್ರಸಿದ್ಧ ಮೇಲುಕೋಟೆ ವೈರಮುಡಿ ಉತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಭಕ್ತರ ಹೆಗಲ ಮೇಲೆ ವಿರಾಜಮಾನವಾಗಿ ವಜ್ರದ ಕಿರೀಟ ಧರಿಸಿದ್ದ ಉತ್ಸವ ಮೂರ್ತಿ ಕಂಗೊಳಿಸುತ್ತಿತ್ತು. ಭಕ್ತರು ಚಲುವನಾರಾಯಣಸ್ವಾಮಿ ಸ್ಮರಣೆ ಹಾಗೂ ಗೋವಿಂದ ಗೋವಿಂದ ಎಂದು ನಾಮಸ್ಮರಣೆ ಮಾಡಿ ಪುಳಕಿತರಾದರು.
ಚಲುವನಾರಾಯಣಸ್ವಾಮಿ ದೇವಸ್ಥಾನದ ರಾಮಾನುಜಚಾರ್ಯ ಮಂಟಪದಲ್ಲಿ ಕಿರೀಟ ಧಾರಣೆ ಮಾಡಲಾಯಿತು. ವಜ್ರ ಖಚಿತ ವೈರಮುಡಿಯನ್ನು ಉತ್ಸವ ಮೂರ್ತಿಗೆ ತೊಡಿಸಿ ದೇವಸ್ಥಾನದ ಪರಿಚಾರಕರು ಹೆಗಲ ಮೇಲೆ ಹೊತ್ತು ಬರುತ್ತಿದ್ದಂತೆ ಭಕ್ತರು ಜಯಘೋಷ ಮೊಳಗಿಸಿದರು. ಮೈಸೂರು ಸಂಸ್ಥಾನದ ರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉತ್ಸವ ಮೂರ್ತಿಗೆ ನಮನ ಸಲ್ಲಿಸಿದರು.
ಇನ್ಫೋಸಿಸ್ ಫೌಂಡೇಷನ್‌ನ ಸುಧಾ ಮೂರ್ತಿ ದೇವರ ದರ್ಶನ ಪಡೆದರು. ಉತ್ಸವ ಮೂರ್ತಿ ಹೊರಕ್ಕೆ ಬರುತ್ತಿದ್ದಂತೆ ಯದುವೀರ್ ಮುಖ್ಯ ದ್ವಾರದಲ್ಲಿ ಪೂಜೆ ಸಲ್ಲಿಸಿದರು. ನಂತರ ಮೂರ್ತಿ ಉತ್ಸವ ಮಾಡಲಾಯಿತು.ವೈರಮುಡಿ ಉತ್ಸವಕ್ಕೆ ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಉತ್ಸವದ ನಂತರ ದೇವರ ದರ್ಶನ ಪಡೆದು ಹರಕೆಯನ್ನು ತೀರಿಸಿದರು. ಉತ್ಸವಕ್ಕೂ ಮೊದಲು ಜಿಲ್ಲಾಧಿಕಾರಿ ಮಂಜುಶ್ರೀ ಸಮ್ಮುಖದಲ್ಲಿ ದೇವಸ್ಥಾನದ ಮುಖ ಮಂಟಪದಲ್ಲಿ ಆಭರಣಗಳನ್ನು ಪರಿಶೀಲನೆ ಮಾಡಲಾಯಿತು. ನಂತರ ದೇವಸ್ಥಾನದ ಆಸ್ಥಾನಿಕರು ಉತ್ಸವ ಮೂರ್ತಿಗೆ ವೈರಮುಡಿ ಕಿರೀಟ ಧರಿಸಿ ಉತ್ಸವ ನಡೆಸಿದರು.