ತುಮಕೂರು: ಅನಗತ್ಯವಾಗಿ ಆಕ್ಸಿಜನ್ ಬಳಕೆ ಮಾಡಬಾರದು. ಗೈಡ್ ಲೈನ್ ನಂತೆಯೇ ಸೋಂಕಿತರಿಗೆ ಆಕ್ಸಿಜನ್ ಮತ್ತು ರೆಮ್ಡೆಸಿವಿರ್ ಕೊಡಬೇಕು. ಆಕ್ಸಿಜನ್ ಕೊರತೆಯಾಗಿ ಸಮಸ್ಯೆ ಉಂಟಾಗಿ ದೂರುಗಳು ಕೇಳಿಬಂದರೆ ನಿರ್ದಾಕ್ಷಿಣ್ಯವಾಗಿ ತಾಲೂಕು ಕಾರ್ಯಪಡೆಯನ್ನೇ ಹೊಣೆ ಮಾಡಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಎಲ್ಲಾ ಕ್ಷೇತ್ರಗಳ ಶಾಸಕರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಎಲ್ಲಾ ಆಕ್ಸಿಜನ್ ಲೈನ್ ಗಳನ್ನು ಸಮರ್ಪಕವಾಗಿ ಪರೀಕ್ಷೆ ಮಾಡಬೇಕು. ಆಕ್ಸಿಜನ್ ಖಾಲಿಯಾಗುವವರೆಗೂ ಕಾಯಬಾರದು. ಶೇ 25ರಷ್ಟು ಖಾಲಿಯಾದ ತಕ್ಷಣ ಅದನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.
ಹಳ್ಳಿಗಳಲ್ಲಿ ಕೋವಿಡ್ ವ್ಯಾಪಕವಾಗುವುದಕ್ಕೆ ಕಡಿವಾಣ ಹಾಕಬೇಕು
ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಹಳ್ಳಿಗಳಲ್ಲಿ ಕೋವಿಡ್ ವ್ಯಾಪಕವಾಗುವುದಕ್ಕೆ ಕಡಿವಾಣ ಹಾಕಬೇಕು. ಹಾಗಾಗಿ ಹೋಂ ಕ್ವಾರಂಟೈನ್ ನಲ್ಲಿರುವ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ಗೆ ಸ್ಥಳಾಂತರಿಸಬೇಕು. ಹೋಂ ಕ್ವಾರಂಟೈನ್ ನಲ್ಲಿರುವ ಸೋಂಕಿತರ ಮನೆಯವರ ಸ್ವಾಬ್ ಸಂಗ್ರಹ ಮಾಡಿ ವರದಿ ಬರುವವರೆಗೂ ಅವರನ್ನು ಕ್ವಾರಂಟೈನ್ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಆರ್ ಟಿಪಿಸಿಆರ್ ವರದಿ ಇಲ್ಲದೇ ಜ್ವರ, ನೆಗಡಿ, ಕೆಮ್ಮು ಸೇರಿದಂತೆ ಇತರ ಕಾಯಿಲೆಗಳಿಗೆ ವೈದ್ಯಕೀಯ ಸೇವೆ ನೀಡುತ್ತಿರುವ ಆಸ್ಪತ್ರೆಗಳನ್ನು ಕಡ್ಡಾಯವಾಗಿ ಬಂದ್ ಮಾಡಬೇಕು ಎಂದು ತಾಲೂಕು ತಹಶೀಲ್ದಾರರಿಗೆ ನಿರ್ದೇಶಿಸಿದರು.
ಕುಣಿಗಲ್ ಶಾಸಕ ಡಾ.ರಂಗನಾಥ್ ಮಾತನಾಡಿ, ಆಕ್ಸಿಜನ್ ಮತ್ತು ರೆಮ್ಡೆಸಿವಿರ್ ಕೊರತೆಯಾಗದಂತೆ ಸಮರ್ಕವಾಗಿ ತಾಲೂಕಿಗೆ ಪೂರೈಕೆ ಮಾಡಬೇಕು ಎಂದು ಮನವಿ ಮಾಡಿದರು.
ಟಿಪಿಸಿಆರ್ ವರದಿ ತಡವಾಗಿ ಬರುತ್ತಿದೆ
ಶಿರಾ ಶಾಸಕ ಡಾ.ರಾಜೇಶ್ ಗೌಡ ಮಾತನಾಡಿ, ಆರ್ ಟಿಪಿಸಿಆರ್ ವರದಿ ತಡವಾಗಿ ಬರುತ್ತಿದ್ದು, ಇದರಿಂದ ಸೋಂಕಿತರು ವರದಿ ಬರುವಷ್ಟರಲ್ಲಿ ಗಂಭೀರ ಸ್ಥಿತಿಗೆ ತಲುಪುತ್ತಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೋವಿಡ್ ವರದಿ ವಿಳಂಬವಾಗುತ್ತಿದ್ದ ಸಮಸ್ಯೆಯನ್ನು ಸರಿಪಡಿಸಲಾಗಿದ್ದು, 24 ಗಂಟೆಯೊಳಗೆ ವರದಿ ಬರುವಂತೆ ಕ್ರಮ ಕೈಗೊಳ್ಳಲಾಗಿದೆ. ತುಮಕೂರು ಹೊರತುಪಡಿಸಿದರೆ ಶಿರಾ ತಾಲೂಕಿನಲ್ಲಿಯೇ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ ನಿಯಂತ್ರಣಕ್ಕೆ ಹೆಚ್ಚು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ತಿಪಟೂರು ಶಾಸಕ ಬಿ.ಸಿ. ನಾಗೇಶ್ ಮಾತನಾಡಿ, ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಆಕ್ಸಿಜನ್ ಪೂರೈಕೆ ಇನ್ನಷ್ಟು ಹೆಚ್ಚಿಸಬೇಕು. ಹಾಸಿಗೆ ವ್ಯವಸ್ಥೆಯನ್ನು ನಾವೇ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.