ಬೆಂಗಳೂರು: ಕೊರೊನಾ ಎರಡನೇ ಅಲೆಯ ಅಬ್ಬರವನ್ನು ನಿಯಂತ್ರಿಸಲು ಲಾಕ್‌ಡೌನ್ ಹೇರಿಕೆ ಮಾಡಿದ್ದ ಸರ್ಕಾರ ಇದೀಗ ಅನ್‌ಲಾಕ್ ಪ್ರಕ್ರಿಯೆ ಪ್ರಾರಂಭಿಸಲಿದೆ. ಕಳೆದ ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ಕಠಿಣ ಲಾಕ್ಡೌನ್ಗೊಳಗಾಗಿದ್ದ ಕರುನಾಡನ್ನು ಹಂತ ಹಂತವಾಗಿ ಅನ್‌ಲಾಕ್ ಮಾಡಲು ಸರ್ಕಾರ ಪ್ಲಾನ್ ರೂಪಿಸಿದೆ. ಕೊರೊನಾ ಎರಡನೇ ಅಲೆ ಕರುನಾಡನ್ನು ಸಂಪೂರ್ಣ ನಲುಗಿಸಿದೆ.
ದಿನೇದಿನೆ ಉಲ್ಬಣಿಸುತ್ತಿದ್ದ ಕೊರೊನಾ ಅಬ್ಬರ, ಮತ್ತೊಂದೆಡೆ ಹೆಚ್ಚುತ್ತಿರುವ ಸಾವಿನ ಸಂಖ್ಯೆ ರಾಜ್ಯವನ್ನು ಸಂಪೂರ್ಣ ಹಿಂಡಿ ಹಿಪ್ಪೆಯಾಗಿಸಿತ್ತು. ಈ ಕೊರೊನಾದ ಆರ್ಭಟಕ್ಕೆ ನಿಯಂತ್ರಣ ಹೇರಲು ಅನಿವಾರ್ಯವಾಗಿ ಸರ್ಕಾರ ಲಾಕ್‌ಡೌನ್ ಮೊರೆ ಹೋಗಿತ್ತು.
ಏಪ್ರಿಲ್ 27ರಿಂದ ಚಾಲ್ತಿಯಲ್ಲಿರುವ ಲಾಕ್ಡೌನ್ನ ದಿನಗಳೆದಂತೆ ಮತ್ತಷ್ಟು ಬಿಗಿಗೊಳಿಸಲಾಯಿತು. ಜೂನ್ 14ರವರೆಗೆ ರಾಜ್ಯದಲ್ಲಿ ಬಿಗಿ ಲಾಕ್‌ಡೌನ್ ಮುಂದುವರಿದಿದೆ. ಇದೀಗ ಕೊರೊನಾ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಾಣುತ್ತಿರುವುದರಿಂದ ಸರ್ಕಾರ ಅನ್‌ಲಾಕ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ.
ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ದಿನೇದಿನೆ ಶೇ.10ಕ್ಕಿಂತ ಕಡಿಮೆ ಬರುತ್ತಿದೆ. ಹೀಗಾಗಿ, ಸರ್ಕಾರ ಜೂನ್ 7ರಿಂದ ರಾಜ್ಯವನ್ನು ಹಂತ ಹಂತವಾಗಿ ಲಾಕ್ನಿಂದ ಬಿಡುಗಡೆಗೊಳಿಸುವುದು ನಿಶ್ಚಿತ. ಈಗಾಗಲೇ ಸರ್ಕಾರ ಇತರ ರಾಜ್ಯಗಳಲ್ಲಿನ ಅನ್‌ಲಾಕ್ ಪ್ರಕ್ರಿಯೆ, ಕಳೆದ ವರ್ಷ ಮಾಡಿದ ಅನ್‌ಲಾಕ್ ಪ್ರಕ್ರಿಯೆಯ ಆಧಾರದಲ್ಲಿ ರಾಜ್ಯದಲ್ಲೂ ಹಂತ ಹಂತವಾಗಿ ಅನ್‌ಲಾಕ್ ಮಾಡಲು ನಿರ್ಧರಿಸಿದೆ. ಆ ಮೂಲಕ ಜೀವದ ಜೊತೆಗೆ ಜೀವನಕ್ಕೂ ಅವಕಾಶ ಮಾಡಿಕೊಡಲಿದೆ. ಜೊತೆಗೆ ಆರ್ಥಿಕ ಚಟುವಟಿಕೆಗಳಿಗೆ ಚೇತರಿಕೆ ನೀಡಲು ಮುಂದಾಗಿದೆ.
ಸರ್ಕಾರ ರೂಪಿಸುತ್ತಿರುವ ಅನ್‌ಲಾಕ್ ಪ್ರಕ್ರಿಯೆ ಹೇಗಿದೆ?:ಕಳೆದ ಒಂದೂವರೆ ತಿಂಗಳಿಂದ ಕಠಿಣ ಲಾಕ್‌ಡೌನ್ ಜಾರಿಯಲ್ಲಿದೆ. ಬಹುತೇಕ ಆರ್ಥಿಕ ಚಟುವಟಿಕೆ ಸ್ತಬ್ಧವಾಗಿದೆ. ಇದರಿಂದ ರಾಜ್ಯದ ಆರ್ಥಿಕತೆಗೆ, ಖಜಾನೆಗೆ ಭಾರೀ ಹೊಡೆತ ಬೀಳುತ್ತಿದೆ. ಹೀಗಾಗಿ, ಸರ್ಕಾರಕ್ಕೆ ಅನ್‌ಲಾಕ್ ಪ್ರಕ್ರಿಯೆ ಪ್ರಾರಂಭಿಸುವುದು ಅನಿವಾರ್ಯವಾಗಿದೆ.
ಇತ್ತ ರಾಜ್ಯದಲ್ಲಿ ಕೊರೊನಾ ಪ್ರಕರಣ ಇಳಿಕೆಯಾಗುತ್ತಿರುವುದರಿಂದ ಸರ್ಕಾರ ಅನ್‌ಲಾಕ್ ಸಿದ್ಧತೆಯಲ್ಲಿ ತೊಡಗಿದೆ. ಕೊರೊನಾ ವೈರಸ್ ಪಕ್ಕದಲ್ಲೇ ಇದ್ದು, ಮಹಾಮಾರಿ ಮತ್ತೆ ವಕ್ಕರಿಸದಂತೆ ಜಾಗರೂಕತೆಯಿಂದ ಅನ್‌ಲಾಕ್ ಮಾಡುವುದು ಸರ್ಕಾರದ ಮುಂದಿರುವ ಸವಾಲಾಗಿದೆ. ಇದಕ್ಕಾಗಿಯೇ ಸರ್ಕಾರ ವೈಜ್ಞಾನಿಕವಾಗಿ, ತಜ್ಞರು ನೀಡಿದ ವರದಿ ಆಧಾರದಲ್ಲಿ ಕೊರೊನಾ ಹರಡದಂತೆ ಹಂತ ಹಂತ ಲಾಕ್‌ಡೌನ್ ತೆರವುಗೊಳಿಸುವ ಯೋಜನೆ ರೂಪಿಸಿದೆ.
ಕಳೆದ ಬಾರಿಯ ರಾಷ್ಟ್ರೀಯ ಲಾಕ್‌ಡೌನ್ ಬಳಿಕ ಮಾಡಿದ ಅನ್‌ಲಾಕ್ ಅನುಭವ ತಮ್ಮ ಮುಂದೆ ಇದ್ದು, ಅದರಂತೆ ಹಂತ ಹಂತವಾಗಿ, ಪರಿಸ್ಥಿತಿಗೆ ತಕ್ಕುದಾಗಿ ಅನ್‌ಲಾಕ್ ಮಾಡುವುದಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ತಿಳಿಸಿದ್ದಾರೆ. ಇದರ ಜೊತೆಗೆ ಇತರ ರಾಜ್ಯಗಳಲ್ಲಿ ಮಾಡಲಾದ ಲಾಕ್‌ಡೌನ್ ತೆರವು ಮಾನದಂಡವನ್ನು ರಾಜ್ಯದಲ್ಲೂ ಪರಿಗಣಿಸಲಾಗುವುದು.
ಸದ್ಯ ಐದು ಹಂತಗಳಲ್ಲಿ ಅನ್‌ಲಾಕ್ ಮಾಡಲು ನಿರ್ಧರಿಸಲಾಗಿದೆ. ಹಲವು ವಲಯಗಳಿಗೆ ನಿರ್ಬಂಧದೊಂದಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ನಾಳೆ ಸಿಎಂ ಜೊತೆಗೆ ನಡೆಯುವ ಸಭೆಯಲ್ಲಿ ಅನ್‌ಲಾಕ್ ಮಾರ್ಗಸೂಚಿ ಬಗ್ಗೆ ಅಂತಿಮ ನಿರ್ಧಾರವಾಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಅನ್‌ಲಾಕ್ ಬ್ಲೂಪ್ರಿಂಟ್ ಹೇಗಿರಲಿದೆ? :
- ಕೈಗಾರಿಕಾ ಚಟುವಟಿಕೆಗಳಿಗೆ ಅನುಮತಿ
- ಸಾರಿಗೆ ಸಂಚಾರಕ್ಕೆ ನಿರ್ಬಂಧಿತ ಅವಕಾಶ
- ನಮ್ಮ ಮೆಟ್ರೋ ಸಂಚಾರಕ್ಕೆ ನಿರ್ಬಂಧಿತ ಅನುಮತಿ
- ಓಲಾ, ಉಬರ್, ಆಟೋ ಸಂಚಾರಕ್ಕೆ ಅನುಮತಿ
- ಮಾಲ್, ವಾಣಿಜ್ಯ ಸಂಕೀರ್ಣಗಳಿಗೆ 50% ಅನುಮತಿ
- ಸಾರ್ವಜನಿಕ ವಾಹನಗಳಲ್ಲಿ 50% ಪ್ರಯಾಣಿಕರಿಗೆ ಅವಕಾಶ
- ಸಲ್ಯೂನ್ಗಳಿಗೆ ಅನುಮತಿ
- ಪಾರ್ಕ್ಗಳಿಗೆ ನಿರ್ಬಂಧಿತ ಅವಕಾಶ
- ಅಗತ್ಯೇತರ ಅಂಗಡಿ ಮುಂಗಟ್ಟಿಗೂ ನಿರ್ಬಂಧಿತ ಅವಕಾಶ
- ಹೋಟೆಲ್, ಬಾರ್, ರೆಸ್ಟೋರೆಂಟ್‌ಗಳಿಗೂ ನಿರ್ಬಂಧಿತ ಅವಕಾಶ
- ಪ್ರಕರಣ ಹೆಚ್ಚಿರುವ ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧ ವಿಸ್ತರಣೆ
- ಮೈಕ್ರೋ ಕಂಟೇನ್ಮೆಂಟ್ ಝೋನ್ಗೆ ಹೆಚ್ಚಿನ ಒತ್ತು
- ಸಭೆ-ಸಮಾರಂಭ, ರಾಜಕೀಯ ಸಭೆ, ಗುಂಪು ಸೇರುವಿಕೆಗೆ ನಿಷೇಧ
- ಮದುವೆ ಸಮಾರಂಭಕ್ಕೂ ನಿರ್ಬಂಧಿತ ಅವಕಾಶ
- ಸದ್ಯ ಪಬ್, ಜಿಮ್, ಈಜುಕೊಳ, ಸಿನಿಮಾ ಥಿಯೇಟರ್ಗೆ ನಿಷೇಧ
- ನೈಟ್ ಕರ್ಫ್ಯೂ ಮುಂದುವರಿಸಲು ಚಿಂತನೆ
- ಕಠಿಣ ನಿಯಂತ್ರಕ ಕ್ರಮಗಳು ಮುಂದುವರಿಕೆ
- ಧಾರ್ಮಿಕ ಕೇಂದ್ರಗಳಿಗೆ ನಿರ್ಬಂಧಿತ ಅವಕಾಶ
- ಅಂತಾರಾಜ್ಯ, ಅಂತರ ಜಿಲ್ಲಾ ಪ್ರಯಾಣಕ್ಕೆ ನಿರ್ಬಂಧಿತ ಅವಕಾಶ