ಕಾರವಾರ:ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಸಮಿತಿಯು 12ನೇ ರಾಜ್ಯಮಟ್ಟದ ಬೃಹತ್ ಖಾಸಗಿ ಶಾಲಾ ಶಿಕ್ಷಕರ ನೇಮಕಾತಿ ಉದ್ಯೋಗ ಮೇಳನ್ನು ಮೇ 19ರಂದು ಧಾರವಾಡದಲ್ಲಿ ಹಮ್ಮಿಕೊಂಡಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು ಎಂದು ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಎಚ್.ಎನ್.ನಾಗರಾಜ ತಿಳಿಸಿದರು.
ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಗರಾಜ ಜಿಲ್ಲಾ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ಮೇ 19ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ ಧಾರವಾಡದ ಶಿವಾಜಿ ಸರ್ಕಲ್ ಬಳಿ ಇರುವ ಮರಾಠ ವಿದ್ಯಾ ಪ್ರಸಾರಕ ಮಂಡಳಿಯ ಭಾರತ್ ಹೈಸ್ಕೂಲ್ನಲ್ಲಿ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಉದ್ಯೋಗ ಮೇಳದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳು, ಪ್ರೌಢ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು, ಸ್ನಾತಕೊತ್ತರ ಕಾಲೇಜುಗಳು ಭಾಗವಹಿಸಲಿವೆ. ಡಿಎಡ್, ಬಿಎಡ್, ಎಂಎಡ್ ಸೇರಿದಂತೆ ಪಿಯುಸಿ, ಪದವಿ ಪಡೆದ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದ್ದು, 2500ಕ್ಕೂ ಹೆಚ್ಚು ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ ಎಂದು ತಿಳಿಸಿದರು.
ವಿದ್ಯಾರ್ಹತೆಯ ದಾಖಲಾತಿಗಳ 4 ಸೆಟ್ ಜೆರಾಕ್ಸ್ ಪ್ರತಿ ಹಾಗೂ 4 ಈಚೆಗಿನ ಭಾವಚಿತ್ರಗಳೊಂದಿಗೆ ಧಾರವಾಡಕ್ಕೆ ಬಂದು ನೋಂದಣಿ ಮಾಡಿಕೊಳ್ಳಬಹುದು.
3 ಸಂಸ್ಥೆಗಳಿಗೆ ಮಾತ್ರ ಸಂದರ್ಶನ ನೀಡಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ 9483274367ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.