ಕುಲ್ಗಾಮ್:ಭಾರತೀಯ ಸೇನೆ ಹಾಗೂ ಉಗ್ರರ ನಡುವಿನ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರು ಬಲಿಯಾದ ಘಟನೆ ಜಮ್ಮು- ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಗೋಪಾಲಪೊರ ಗ್ರಾಮದಲ್ಲಿ ನಡೆದಿದೆ.
ಬುಧವಾರ ಮುಂಜಾನೆ ಸೇನೆ ಹಾಗೂ ಭಯೋತ್ಪಾದಕರ ನಡುವೆ ಎನ್ಕೌಂಟರ್ ನಡೆದಿದೆ. ಉಗ್ರರ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿದ ಸೇನೆ, ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಸಫಲವಾಗಿದೆ.
ಉಗ್ರರು ಅಡಗಿರುವ ಬಗ್ಗೆ ಸ್ಪಷ್ಟ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸೇನೆ ಕಾರ್ಯಾಚರಣೆಗೆ ಇಳಿದಿತ್ತು. ಸದ್ಯ ಸೇನೆ ದಾಳಿಗೆ ಬಲಿಯಾಗಿರುವ ಉಗ್ರರ ಗುರುತು ಇನ್ನೂ ತಿಳಿದು ಬಂದಿಲ್ಲ ಎಂದು ಸೇನೆ ಹೇಳಿದೆ. ಮೂಲಗಳ ಪ್ರಕಾರ ಸತ್ತಿರುವ ಉಗ್ರರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದವರು ಎನ್ನಲಾಗಿದೆ.
ಶನಿವಾರದಂದು ಸೇನೆಯ ಎನ್ಕೌಂಟರ್ನಲ್ಲಿ ಮೂವರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರು ಬಲಿಯಾಗಿದ್ದರು. ಅವಂತಿಪೋರಾದಲ್ಲಿ ಈ ಕಾರ್ಯಾಚರಣೆ ನಡೆದಿತ್ತು.