ಕಲಬುರಗಿ: ಕಳೆದ ಮೂರು ವರ್ಷಗಳಿಂದ ಜನ ಸ್ನೇಹಿಯಾಗಿ, ರೌಡಿಗಳಿಗೆ ಸಿಂಹ ಸ್ವಪ್ನವಾಗಿ ಉತ್ತಮ ಆಡಳಿತ ನೀಡಿದ ಐಪಿಎಸ್ ಅಧಿಕಾರಿ ಎನ್.ಶಶಿಕುಮಾರ್ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ.
2007ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದ ಎನ್.ಶಶಿಕುಮಾರ್ ಜಿಲ್ಲೆಗೆ ಆಗಮಿಸಿ ತಮ್ಮ ಮೂರು ವರ್ಷಗಳ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸದಾ ಜನರ ಮಧ್ಯೆ ಬೆರೆಯುತ್ತಿದ್ದ ಅವರಿಗೆ ಸಂಗೀತವೆಂದರೆ ಪಂಚಪ್ರಾಣ. ತಮ್ಮ ಕೆಲಸದ ಮಧ್ಯೆಯೇ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಪೊಲೀಸ್ ಸಿಬ್ಬಂದಿಗೆ ಹುರಿದುಂಬಿಸುವ ಕೆಲಸ ಮಾಡುತ್ತಿದ್ದರು.
ಜನರ ನೋವುಗಳಿಗೆ ಸ್ನೇಹಿತನಂತೆ ಸ್ಪಂದನೆ ನೀಡುತ್ತಿದ್ದ ಐಪಿಎಸ್ ಅಧಿಕಾರಿ ಶಶಿಕುಮಾರ್, ರೌಡಿಗಳಿಗೆ, ಕಾನೂನು ಕೈಗೆತ್ತಿಕೊಳ್ಳುವವರಿಗೆ ಸಿಂಹ ಸ್ವಪ್ನವಾಗಿದ್ದರು. ಕಲಬುರಗಿ ಜಿಲ್ಲೆಯ ಇತಿಹಾಸದಲ್ಲಿಯೇ ಹೆಚ್ಚು ಫೈರಿಂಗ್ ನಡೆದಿದ್ದು ಶಶಿಕುಮಾರ್ ಅವರ ಅವಧಿಯಲ್ಲಿ. ಖಡಕ್ ಎಸ್ಪಿ ಎಂದು ಹೆಸರು ಮಾಡಿದ್ದ ಶಶಿಕುಮಾರ್ ಹೆಸರು ಕೇಳಿದ್ರೆ ರೌಡಿಗಳು ಬಾಲ ಮುದುಡಿಕೊಂಡು ಕೂರುವಂತೆ ದಕ್ಷವಾಗಿ ಕಾರ್ಯನಿರ್ವಹಿಸಿದ್ದಾರೆ.
ಇದೀಗ ಅವರು ಬೆಂಗಳೂರಿನ ಈಶಾನ್ಯ ವಲಯ ಡಿಸಿಪಿ ಆಗಿ ವರ್ಗಾವಣೆಗೊಂಡಿದ್ದಾರೆ. ನೂತನ ಎಸ್ಪಿಯಾಗಿ ಯಾದಗಿರಿ ಜಿಲ್ಲೆಯ ಎಸ್ಪಿಯಾಗಿದ್ದ 2009 ನೇ ಬ್ಯಾಚ್ ಐಪಿಎಸ್ ಅಧಿಕಾರಿ ಲಾಡಾ ಮಾರ್ಟಿನ್ ಮಾರ್ಬಾನಿಯಂಗ್ ನೇಮಕಗೊಂಡಿದ್ದಾರೆ. ಒಟ್ಟಾರೆ ಕಾನೂನು ಗೌರವಿಸುವ, ಎಲ್ಲಾ ಕ್ಷೇತ್ರದ ಜನರಿಗೆ ಬೇಕಿದ್ದ ಎಸ್ಪಿ ಶಶಿಕುಮಾರ್ ಅವರ ವರ್ಗಾವಣೆ ಕಲಬುರಗಿ ಜಿಲ್ಲೆಯ ಜನತೆಗೆ ಅಸಮಾಧಾನ ಹುಟ್ಟಿಸಿದೆ.