ಜೈಪುರ:ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ಕೌರ್ ಕೊನೆಯ ಓವರ್ನಲ್ಲಿ ಗೆಲುವಿಗೆ ಬೇಕಿದ್ದ 19 ರನ್ಗಳಲ್ಲಿ 4 ಬೌಂಡರಿ ಸಿಡಿಸಿ ವಿಶ್ವಶ್ರೇಷ್ಠ ಫಿನಿಷರ್ ಧೋನಿ ಆಟವನ್ನು ನೆನಪಿಸಿದರು. ಆದರೆ, ಕೌರ್ ಕೊನೆಯ ಎಸೆತದಲ್ಲಿ 3 ರನ್ಗಳಿಸಲು ವಿಫಲರಾದ ಹಿನ್ನೆಲೆ ಅವರ ತಂಡ 2 ರನ್ಗಳ ರೋಚಕ ಸೋಲು ಕಂಡಿತು.
ಕ್ರಿಕೆಟ್ ಜಗತ್ತಿನ ಶ್ರೀಮಂತ ಹಾಗೂ ಜನಪ್ರಿಯ ಟಿ-20 ಲೀಗ್ ಆದ ಐಪಿಎಲ್ ಲೀಗ್ನಲ್ಲಿ ಮಹಿಳಾ ಕ್ರಿಕೆಟ್ ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ 3 ತಂಡಗಳ ಮಿನಿ ಟಿ-20 ಚಾಲೆಂಜ್ನ ಬಿಸಿಸಿಐ ಆಯೋಜಿಸಿದೆ. ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ಭಾರತ ಟಿ-20 ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಸೂಪರ್ ನೋವಾಸ್ ತಂಡ ಸ್ಮೃತಿ ಮಂಧಾನರ ನೇತೃತ್ವದ ಟ್ರೈಲ್ಬ್ಲೇಜರ್ ತಂಡದ ವಿರುದ್ಧ 2 ರನ್ಗಳ ರೋಚಕ ಸೋಲು ಕಂಡಿತು. ಕೊನೆಯ ಓವರ್ನಲ್ಲಿ ಕೌರ್ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಮೊದಲು ಬ್ಯಾಟಿಂಗ್ ನಡೆಸಿದ್ದ ಟ್ರೈಲ್ಬ್ಲೇಜರ್ ಮಂಧಾನರ 90 ರನ್ಗಳ ನೆರವಿನಿಂದ 140ರನ್ಗಳಿಸಿತ್ತು. ಈ ಮೊತ್ತ ಬೆನ್ನತ್ತಿದ ಕೌರ್ ಬಳಗಕ್ಕೆ ಸಾಮರಿ ಅಟಪಟ್ಟು 26, ರೋಡ್ರಿಗಸ್ 24, ಕೌರ್ 46 ಹಾಗೂ ಡಿವೀನ್ 32 ರನ್ಗಳಿಸಿ ಗೆಲುವಿಗೆ ಪ್ರಯತ್ನಿಸಿದರಾದರೂ 20 ಓವರ್ಗಳಲ್ಲಿ 138 ರನ್ಳಿಸಿ 2 ರನ್ಗಳ ಸೋಲನುಭವಿಸಿದರು.
ರೋಚಕ ಹಣಾಹಣಿಗೆ ಸಾಕ್ಷಿಯಾದ ಕೌರ್-ಗೋಸ್ವಾಮಿ ಕಾಳಗ :
ಕೊನೆಯ ಓವರ್ನಲ್ಲಿ 19 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ಜೂಲಾನ ಗೋಸ್ವಾಮಿ ಎಸೆದ ಕೊನೆಯ ಓವರ್ನಲ್ಲಿ ಮೊದಲ ಎರಡು ಎಸೆತಗಳನ್ನು ಕೌರ್ ಬೌಂಡರಿಗಟ್ಟಿದರು. ನಂತರದ ಎಸೆತ ಡಾಟಾದರೆ, 4 ಮತ್ತು 5 ನೇ ಎಸೆತದಲ್ಲಿ ಕೌರ್ ಮತ್ತೆರಡು ಬೌಂಡರಿ ಸಿಡಿಸಿದರು. ಕೊನೆಯ ಎಸೆತದಲ್ಲಿ ಗೆಲ್ಲಲು 3 ರನ್ಗಳ ಅವಶ್ಯಕತೆಯಿತ್ತು. ಆದರೆ, ಗೋಸ್ವಾಮಿ ಸ್ಲೋ ಬಾಲನ್ನು ಎದುರಿಸಲು ಕೌರ್ ವಿಫಲರಾದರು. ಚೆಂಡು ನೇರವಾಗಿ ಕೀಪರ್ ಸೇರಿ ರನ್ಔಟ್ ಆಯಿತು. ಆದರೂ ಗೋಸ್ವಾಮಿಯಂತಹ ವಿಶ್ವಶ್ರೇಷ್ಠ ವೇಗದ ಬೌಲರ್ಗೆ ಕೊನೆಯ ಓವರ್ನಲ್ಲಿ 4 ಬೌಂಡರಿ ಸಿಡಿಸಿ ಪಂದ್ಯವನ್ನು ಅಂತಿಮ ಬಾಲ್ವರಗೆ ತೆಗೆದುಕೊಂಡು ಹೋದ ಕೌರ್ ಆಟ ಭಾರತದ ಕೂಲ್ ಕ್ಯಾಪ್ಟನ್ ಧೋನಿಯನ್ನ ನೆನೆಪಿಸಿತು. ಧೋನಿ ಕೂಡ ಕೊನೆಯ ಓವರ್ನಲ್ಲಿ ಇಂತಹ ಎಷ್ಟೋ ಪಂದ್ಯಗಳನ್ನು ಗೆಲ್ಲಿಸಿ ವಿಶ್ವ ಶ್ರೇಷ್ಠ ಫಿನಿಷರ್ ಎಂಬ ಹೆಸರು ಪಡೆದಿದ್ದಾರೆ.
ಹರ್ಮನ್ ಪ್ರೀತ್ ಕೌರ್ ಹಿಂದೊಮ್ಮೆ ದ.ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಪಂದ್ಯದಲ್ಲಿ ತಂಡ 9 ವಿಕೆಟ್ ಕಳೆದುಕೊಂಡಿದ್ದರೂ ಕೊನೆಯ ಓವರ್ನಲ್ಲಿ ಸಿಕ್ಸರ್ ಸಿಡಿಸಿ ತಂಡಕ್ಕೆ 1 ವಿಕೆಟ್ನಿಂದ ರೋಚಕ ಜಯ ತಂದುಕೊಟ್ಟಿದ್ದರು. ಅಂದೇ ಕೌರ್ರನ್ನು ಮಹಿಳಾ ಕ್ರಿಕೆಟ್ನ ಧೋನಿ ಎಂದು ಕ್ರಿಕೆಟ್ ಪಂಡಿತರು ಕರೆದಿದ್ದರು. ನಿನ್ನೆ ಮತ್ತೊಮ್ಮೆ ಅದನ್ನು ಕೌರ್ ಸಾಬೀತುಪಡಿಸಿದರು.
ಕೊನೆಯ ಓವರ್ ವಿಡಿಯೋ ಹರ್ಮನ್ ಪ್ರೀತ್ ಕೌರ್