ಚಿಕ್ಕಮಗಳೂರು: ಸರ್ಕಾರದ ಮಾರ್ಗಸೂಚಿಗೆ ಅನುಗುಣವಾಗಿ, ಕೊರೊನಾ ಮುನ್ನೆಚ್ಚರಿಕಾ ಕ್ರಮಗಳು ಅನುಸರಿಸಿ, ಪ್ರವಾಸೋದ್ಯಮ ಪ್ರಾರಂಭಿಸಬಹುದು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಹೆಚ್ಚಾಗಿ ಪ್ರವಾಸಿ ತಾಣಗಳು ಇರುವ ಹಿನ್ನೆಲೆ ಪ್ರವಾಸಿಗಳು ಬರುವುದರಿಂದಾಗಿ ಇಲ್ಲಿರುವ ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ಹೋಮ್ ಸ್ಟೇಗಳು ಸೋಂಕು ಹರಡದಂತೆ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಅಗತ್ಯವಾಗಿ ಪಾಲಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು ಎಂದಿದ್ದಾರೆ.
ಮುಖ್ಯವಾಗಿ 65 ವರ್ಷ ಮೇಲ್ಪಟ್ಟವರಿಗೆ, ಕಾಯಿಲೆಗಳಿಂದ ಬಳಲುತ್ತಿರುವವರಿಗೆ, ಗರ್ಭಿಣಿಯರಿಗೆ ಮತ್ತು 10 ವರ್ಷದೊಳಗಿನ ಚಿಕ್ಕ ಮಕ್ಕಳಿಗೆ ಇರಲು ಅವಕಾಶ ನೀಡಬಾರದು. ಇಂತಹವರಿಗೆ ಕೊಠಡಿಗಳನ್ನು ನೀಡಿದರೆ ಮುಂದೆ ಆಗುವ ಅನಾಹುತಗಳಿಗೆ ನೀವೇ ಜವಾಬ್ದಾರರಾಗುತ್ತೀರಿ ಎಂದು ಡಿಸಿ ಎಚ್ಚರಿಸಿದ್ದಾರೆ.
ಬರುವಂತಹ ಎಲ್ಲಾ ಪ್ರವಾಸಿಗರಿಗೂ ಮುಂಜಾಗೃತ ಕ್ರಮವಾಗಿ ಥರ್ಮಲ್ ಸ್ಕ್ಯಾನಿಂಗ್ ನಡೆಸಬೇಕು, ಎಲ್ಲರೂ ಕಡ್ಡಾಯವಾಗಿ ಮಾಸ್ಕ್‌ಗಳನ್ನು ಧರಿಸಿರಬೇಕು, ಸ್ಯಾನಿಟೈಸರ್ ಬಳಸಬೇಕು ಮತ್ತು ಕನಿಷ್ಠ 6 ಅಡಿ ಅಂತರವನ್ನು ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು ಹಾಗೂ ಇದನ್ನು ನೋಡಿಕೊಳ್ಳಲು ಒಬ್ಬರನ್ನು ಪ್ರತ್ಯೆಕವಾಗಿ ನೇಮಿಸಿಕೊಳ್ಳಬೇಕು ಎಂದಿದ್ದಾರೆ.
ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಆರೋಗ್ಯ ಇಲಾಖೆಗೆ ತಿಳಿಸಬೇಕು, ಹಾಗೇ ಎಲ್ಲೆಂದರಲ್ಲಿ ಉಗುಳದಂತೆ ತಿಳಿಸಬೇಕು ಹಾಗೂ ಆರೋಗ್ಯ ಸೇತು ಆಪ್ ಡೌನ್‌ಲೋಡ್ ಮಾಡಿ ಬಳಸುವಂತೆ ಜಾಗೃತಿ ಮೂಡಿಸಬೇಕು. ಪಾರ್ಕಿಂಗ್ ಜಾಗದಲ್ಲಿ ಹೆಚ್ಚಾಗಿ ಜನ ಸೇರದಂತೆ ಎಚ್ಚರ ವಹಿಸಿ ವಾಹನ ದಟ್ಟಣೆಯಾಗದಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದ್ದಾರೆ.