ಚೆನ್ನೈ :2019ರಲ್ಲಿ ಬಿಡುಗಡೆ ಆಗಿದ್ದ ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸಿರೀಸ್ ಸಾಕಷ್ಟು ಜನಮೆಚ್ಚುಗೆ ಗಳಿಸಿತ್ತು.ಆದರೆ, ಇತ್ತೀಚಿಗೆ ಬಿಡುಗಡೆಯಾದ ದಿ ಫ್ಯಾಮಿಲಿ ಮ್ಯಾನ್-2 ವೆಬ್ ಸಿರೀಸ್ನ ಟ್ರೇಲರ್ ಕಂಡು ಅನೇಕ ತಮಿಳಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೆಬ್ ಸಿರೀಸ್ ತಮಿಳಿಗರನ್ನು ಕೆಟ್ಟವರಾಗಿ ತೋರಿಸುವ ಉದ್ದೇಶ ಹೊಂದಿದೆ ಮತ್ತು ಎಲ್‌ಟಿಟಿಇಯನ್ನು ಉಗ್ರಗಾಮಿ ಸಂಘಟನೆ ಎಂದು ಬಿಂಬಿಸಲು ಮುಂದಾಗಿದೆ. ಹೀಗಾಗಿ, ಇದನ್ನು ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆ ಮಾಡಬಾರದು ಎಂದು ನಾಮ್ ತಮಿಳರ್ ಕಚ್ಚಿ (ಎನ್‌ಟಿಕೆ) ಸಂಸ್ಥಾಪಕ ಸೀಮನ್ ಒತ್ತಾಯಿಸಿದ್ದಾರೆ.
"ಈ ಸರಣಿಯು ಎಲ್‌ಟಿಟಿಇಯನ್ನು ಉದ್ದೇಶಪೂರ್ವಕವಾಗಿ ಭಯೋತ್ಪಾದಕರು ಮತ್ತು ತಮಿಳರನ್ನು ಕೆಟ್ಟ ಜನರು ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ. ತಮಿಳುನಾಡನ್ನು ಶೂಟಿಂಗ್ ಸ್ಥಳವಾಗಿ ಆಯ್ಕೆ ಮಾಡಿರುವುದು ಕಾಕತಾಳೀಯವಲ್ಲ" ಎಂದು ಸೀಮನ್ ಹೇಳಿದರು.
"ವೆಬ್ ಸರಣಿಯ ಕಥೆಯಲ್ಲಿ ಸಮಂತಾ ಉಗ್ರಗಾಮಿ ಸಂಘಟನೆಯ ಸದಸ್ಯಳಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಆಕೆಯ ಉಡುಪಿನ ಬಣ್ಣವು ಎಲ್‌ಟಿಟಿಇ ಸಮವಸ್ತ್ರವನ್ನು ಹೋಲುತ್ತದೆ. ಅಲ್ಲಿ ನಡೆಯುವ ಸಂಭಾಷಣೆಯು ಪಾಕಿಸ್ತಾನದ ಐಎಸ್‌ಐ ನಡುವಿನ ಸಂಪರ್ಕವನ್ನು ಉಲ್ಲೇಖಿಸುತ್ತವೆ" ಎಂದು ಅವರು ಹೇಳಿದ್ದಾರೆ.
ಇದು ತಮಿಳರನ್ನು ದಾರಿ ತಪ್ಪಿಸಲು ರಚಿಸಲಾದ ಸರಣಿ. ಟ್ರೈಲರ್ ಬಿಡುಗಡೆಯಾದ ತಕ್ಷಣ, ಪ್ರಪಂಚದಾದ್ಯಂತದ ಅನೇಕ ತಮಿಳರು ಖಂಡನೆ ವ್ಯಕ್ತಪಡಿಸಿದ್ದಾರೆ ಎಂದು ಸೀಮನ್ ಹೇಳಿದ್ದಾರೆ.