ನವದೆಹಲಿ:ದೇಶಾದ್ಯಂತ ಲೋಕಸಮರದ ಕಾವು ಜೋರಾಗಿದೆ. ಈಗಾಗಲೇ ನಾಲ್ಕು ಹಂತದ ಚುನಾವಣೆ ಪೂರ್ಣಗೊಂಡಿದೆ. ಇನ್ನೊಂದೆಡೆ ಕಳೆದೆಲ್ಲ ಚುನಾವಣೆಗಿಂತ ಈ ಬಾರಿ ಹಣದ ಹೊಳೆ ಸಖತ್ತಾಗೇ ಹರಿಯುತ್ತಿದೆ. ಚುನಾವಣೆಯಲ್ಲಿ ಅಕ್ರಮಗಳ ಸಂತೆಯೇ ಮುಂದುವರೆದಿದೆ.
ಈ ಬಾರಿ ಚುನಾವಣಾ ಆಯೋಗ ಇದುವರೆಗೂ 3,274 ಕೋಟಿ ರೂ ಮೌಲ್ಯದ ವಸ್ತು ಹಾಗೂ ನಗದು ಸೇರಿದಂತೆ ಇಷ್ಟೊಂದು ಪ್ರಮಾಣದ ಅಕ್ರಮ ಸಂಪತ್ತನ್ನು ಜಪ್ತಿ ಮಾಡಿದೆ. ಇದೆಲ್ಲ ಯಾವುದೇ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ದಾಖಲೆ ಇಲ್ಲದ ಹಣವಾಗಿದೆ.
ಇದುವರೆಗೂ ಸುಮಾರು 785 ಕೋಟಿ ರೂ. ಕೇವಲ ನಗದು ವಶಪಡಿಸಿಕೊಂಡಿದ್ದರೆ, 249 ಕೋಟಿ ಮೌಲ್ಯದ ಮದ್ಯ, 1214 ಕೋಟಿ ಮೌಲ್ಯದ ಮಾದಕ ವಸ್ತುಗಳು, ಸುಮಾರು 972 ಕೋಟಿ ಮೌಲ್ಯದ ಬಂಗಾರ ಸೇರಿದಂತೆ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನ ವಶಕ್ಕೆ ಪಡೆದಿದೆ. ಇವೆಲ್ಲ ಸೇರಿ ಇವುಗಳ ಒಟ್ಟಾರೆ ಮೌಲ್ಯ ಬರೋಬ್ಬರಿ 3271.18 ಕೋಟಿ ರೂ. ಎಂದು ಚುನಾವಣಾ ಆಯೋಗ ಘೋಷಿಸಿದೆ.
ಇದು ನಾಲ್ಕನೇ ಹಂತದವರೆಗಿನ ಲೆಕ್ಕಾಚಾರ ಮಾತ್ರ ಇನ್ನೂ ಮೂರು ಹಂತಗಳು ಬಾಕಿ ಇದ್ದು, ಇನ್ನೆಷ್ಟು ಅಕ್ರಮ ಸಂಪತ್ತು ಆಯೋಗ ಪಾಲಾಗುತ್ತದೋ ನೋಡಬೇಕಿದೆ.