ಕೊಪ್ಪಳ : ಜನ್ಮ ದಿನಾಚರಣೆ ಆಚರಿಸಿಕೊಳ್ಳುವ ಹಣವನ್ನು ಕೆರೆ ಹೂಳೆತ್ತುವ ಕೆಲಸಕ್ಕೆ ನೀಡುವ ಮೂಲಕ ಇಲ್ಲೊಬ್ಬ ಬಾಲಕ ಇತರರಿಗೂ ಮಾದರಿಯಾಗಿದ್ದು, ಎಲ್ಲರ ಗಮನ ಸೆಳೆದಿದ್ದಾನೆ.
ಹುಟ್ಟುಹಬ್ಬಕ್ಕೆ ಮೀಸಲಿಟ್ಟ ಹಣವನ್ನು ಕೆರೆ ಹೂಳೆತ್ತುವ ಕೆಲಸಕ್ಕೆ ಕೊಟ್ಟ ಬಾಲಕ - ಕೆರೆ ಹೂಳೆತ್ತುವ ಕೆಲಸ
ಯಲಬುರ್ಗಾ ತಾಲೂಕಿನ ಬಾಲಕನೊಬ್ಬ ಜನ್ಮ ದಿನಾಚರಣೆ ಆಚರಿಸಿಕೊಳ್ಳುವ ಹಣವನ್ನು ಕಲಭಾವಿ ಕೆರೆ ಹೂಳೆತ್ತುವ ಕೆಲಸಕ್ಕೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.

ಜಿಲ್ಲೆಯಲ್ಲಿ ಈಗ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗಿರುವ ಕೆರೆ ಹೂಳೆತ್ತುವ ಕೆಲಸಕ್ಕೆ ಸಾರ್ವಜನಿಕರೂ ಕೂಡ ತಮ್ಮ ಕೈಲಾದ ದೇಣಿಗೆ ನೀಡುತ್ತಿದ್ದಾರೆ. ಅದರಂತೆ ನಿನ್ನೆ ಆರಂಭವಾಗಿರುವ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕಲಭಾವಿ ಕೆರೆ ಹೂಳೆತ್ತುವ ಕೆಲಸಕ್ಕೆ ಬಾಲಕನೊಬ್ಬ 11 ಸಾವಿರ ರೂಪಾಯಿ ದೇಣಿಗೆ ನೀಡುವ ಮೂಲಕ ತನ್ನ ಸೇವೆ ಸಲ್ಲಿಸಿದ್ದಾನೆ.
ತಾಲೂಕಿನ ಕಲಭಾವಿ ಗ್ರಾಮದ ಶಿವಪ್ರಸಾದ ರುದ್ರಪ್ಪ ಎಂಬ ಬಾಲಕ 11 ಸಾವಿರ ರೂ. ದೇಣಿಗೆ ನೀಡಿರುವವನು. ಶಿವಪ್ರಸಾದ ತನ್ನ 8ನೇ ಜನ್ಮ ದಿನಾಚರಣೆ ಆಚರಿಸಿಕೊಂಡಿದ್ದಾನೆ. ಜನ್ಮ ದಿನಾಚರಣೆಗಾಗಿ ಖರ್ಚು ಮಾಡುವ ಹಣವನ್ನು ಈ ಕೆರೆ ಹೂಳೆತ್ತುವ ಕೆಲಸಕ್ಕೆ ಬಂದು ನೀಡಿದ್ದಾನೆ. ಬಾಲಕನ ಈ ಮನಸ್ಥಿತಿಗೆ ಅಲ್ಲಿದ್ದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.