ಬೆಂಗಳೂರು: ನನ್ನ ಟೆಲಿಫೋನ್ ಕದ್ದಾಲಿಕೆ ಮಾಡಿ ನನ್ನ ಚಲನವಲನಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ್ ಗಂಭೀರ ಆರೋಪ ಮಾಡಿದ್ದು, ಯಾವುದಾದರೂ ಪ್ರಕರಣದಲ್ಲಿ ಸಿಲುಕಿಸಬೇಕು ಎನ್ನುವ ಷಡ್ಯಂತ್ರ ನಡೆಸಲಾಗುತ್ತಿದೆ ಎಂದಿದ್ದಾರೆ.
ಕುಮಾರಕೃಪಾ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ನನ್ನ ಪೋನ್ ಕದ್ದಾಲಿಕೆ ಮಾಡಲಾಗುತ್ತಿದೆ, ನಾನು ಎಲ್ಲಿ ಹೋಗುತ್ತೇನೆ, ಯಾರೊಂದಿಗೆ ಮಾತನಾಡುತ್ತೇನೆ ಎನ್ನುವುದನ್ನು ಮಾನಿಟರಿಂಗ್ ಮಾಡಲಾಗುತ್ತಿದೆ.
ಈ ಸಂಬಂಧ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು ಮತ್ತು ಅಗತ್ಯ ರಕ್ಷಣೆ ಒದಗಿಸಬೇಕು ಎಂದು ಜೂನ್ 14 ರಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರದ ಮೂಲಕ ದೂರು ನೀಡಿರುವುದಾಗಿ ತಿಳಿಸಿದರು.
ಟೆಲಿಫೋನ್ ಕದ್ದಾಲಿಕೆ: ಬಾಂಬ್ ಸಿಡಿಸಿದ ಶಾಸಕ ಅರವಿಂದ ಬೆಲ್ಲದ್ ಫೋನ್ ಕಾಲ್ ಹಿಂದೆ ಪಿತೂರಿ..?
ಬೇರೆ ಬೇರೆ ಕಡೆಯಿಂದ ನನಗೆ ಕರೆಗಳು ಬರುತ್ತಿರುತ್ತವೆ. ಸಭೆ ಸಮಾರಂಭದಲ್ಲಿ ಇದ್ದಾಗ ಕಾಲ್ ಬಂದಿದ್ದರೆ ನನ್ನ ಫೋನ್ ನಲ್ಲಿನಲ್ಲಿ ಇರುವ ಸಂಖ್ಯೆಯಾಗಲಿ ಅನ್ ನೋನ್ ಸಂಖ್ಯೆಯಾಗಲಿ ನಾನು ವಾಪಸ್ ಕರೆ ಮಾಡುತ್ತೇನೆ.
ಕೆಲ ದಿನಗಳ ಹಿಂದೆ ಇದೇ ರೀತಿ ಒಂದು ಸಂಖ್ಯೆಗೆ ವಾಪಸ್ ಮಾಡಿದಾಗ ನನ್ನ ಹೆಸರು ಸ್ವಾಮಿ ಎಂದು ಪರಿಚಯಸಿಕೊಂಡರು, ಯಾವ ಸ್ವಾಮಿ ಎಂದಾಗ ಯುವರಾಜ ಸ್ವಾಮಿ ಎಂದರು. ನನಗೆ ಅವರ ಜೊತೆಗಿನ ಮಾತುಕತೆ ಅನುಮಾನಾಸ್ಪದವಾದ ಕಾರಣ ಕರೆ ಕಟ್ ಮಾಡಿದೆ.
ಮೂರ್ನಾಲ್ಕು ದಿನದಲ್ಲಿ ಮತ್ತೆ ಹೀಗೆಯೇ ಕರೆ ಮಾಡಿದಾಗಲೂ ಯುವರಾಜ ಸ್ವಾಮಿ ಎಂದರು, ಹಿಂದೆ ನಿಮ್ಮೊಂದಿಗೆ ಮಾತನಾಡಿದ್ದೆ, ಅನಾವಶ್ಯಕವಾಗಿ ಜೈಲಿಗೆ ಹಾಕಿದ್ದಾರೆ. ನಾನೀಗ ಆಸ್ಪತ್ರೆಯಲ್ಲಿದ್ದೇನೆ ಅಲ್ಲಿಂದಲೇ ಕರೆ ಮಾಡುತ್ತಿದ್ದೇನೆ ಎಂದರು. ನನಗೆ ಅನುಮಾನ ಬಂದು ಮಾತು ನಿಲ್ಲಿಸಿ ಕರೆ ಕಟ್ ಮಾಡಿದೆ. ಇದೆಲ್ಲಾ ನೋಡಿದರೆ ಈ ಕಾಲ್ ಬಂದಿದ್ದರ ಹಿಂದೆ ದೊಡ್ಡ ಪಿತೂರಿ ಇದೆ.
ಐದು ಬಾರಿ ನಮ್ಮ ತಂದೆ ಚಂದ್ರಕಾಂತ ಬೆಲ್ಲದ್ ಶಾಸಕ ಆದರೂ ಕಪ್ಪು ಚುಕ್ಕೆ ಇಲ್ಲದೇ ರಾಜಕಾರಣ ಮಾಡಿದರು, ನಾನು ಅವರ ಹಾದಿಯಲ್ಲೇ ಪ್ರಾಮಾಣಿಕ ರಾಜಕಾರಣ ಮಾಡುತ್ತಿದ್ದೇನೆ, ನನ್ನಲ್ಲಿ ತಪ್ಪು ಕಂಡುಹಿಡಿಯಲು ಸಾಧ್ಯವಾಗದ್ದಕ್ಕೆ ಈ ರೀತಿ ಜನರಿಂದ ಕರೆ ಮಾಡಿಸಿ ಅದರಲ್ಲಿ ಸಿಲುಕಿಸುವ ಪ್ರಯತ್ನ ನಡೆಯಿತ್ತಿದೆ ಎಂದು ಶಂಕಿಸಿದ್ದಾರೆ.
ಟೆಲಿಫೋನ್ ಕದ್ದಾಲಿಕೆ ವಿರುದ್ಧ ದೂರು:
ಹೊಸ ರೀತಿಯ ತಂತ್ರಜ್ಞಾನ ಮಾಡಿ ಟೆಲಿಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ಈ ರೀತಿ ಆಗುತ್ತಿದೆ. ಯಾರು ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ, ಈ ಬಗ್ಗೆ ದೂರು ನೀಡಿದ್ದೇನೆ. ಇದರ ತನಿಖೆ ಸರ್ಕಾರದ ಜವಾಬ್ದಾರಿ ಆಗಿದೆ ಎಂದರು.
ಅರುಣ್ ಸಿಂಗ್ ಭೇಟಿಗೆ ಸಮಯಾವಕಾಶ ಸಿಕ್ಕಿದೆ, ಸಂಜೆ 4.30 ಕ್ಕೆ ಸಮಯ ನೀಡಿದ್ದಾರೆ. ಪಕ್ಷದ ಕಚೇರಿಗೆ ತೆರಳಿ ಭೇಟಿ ಮಾಡಲಿದ್ದೇನೆ ಎಂದರು.