ಕೊಳ್ಳೇಗಾಲ (ಚಾಮರಾಜನಗರ):ನಗರದಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ಒಳಚರಂಡಿ ವ್ಯವಸ್ಥೆಯಿಂದಾಗಿ 7ನೇ ವಾರ್ಡ್ನ ಒಳಚರಂಡಿ ನೀರು ಪಕ್ಕದ 3ನೇ ವಾರ್ಡ್ನ ರಸ್ತೆಗೆ ಹರಿಯುತ್ತಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ನಗರಸಭಾ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರ ನಡುವೆ ಜಟಾಪಟಿ ನಡೆದು ಸ್ಥಳಕ್ಕೆ ಧಾವಿಸಿದ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡ ಘಟನೆ ಕೊಳ್ಳೇಗಾಲ ಪಟ್ಟಣದಲ್ಲಿ ನಡೆದಿದೆ.
ಇಲ್ಲಿನ 7ನೇ ವಾರ್ಡ್ಗೆ ಸೇರಿದ ಯುಜಿಡಿ ತುಂಬಿಕೊಂಡು ಕಳೆದ 15 ದಿನದಿಂದ ಸಮೀಪದ 3ನೇ ವಾರ್ಡ್ನ ಭೀಮನಗರದ ಕಡೆ ಹರಿಯುತ್ತಿತ್ತು. ಈ ಬಗ್ಗೆ ಬಹಳಷ್ಟು ಬಾರಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜವಾಗಿರಲಿಲ್ಲ. ಇಂದು ಈ ಬಗ್ಗೆ ನಗರಸಭೆ ಮಾಜಿ ಅಧ್ಯಕ್ಷ ರಮೇಶ್ ಬಳಿ 3ನೇ ವಾರ್ಡ್ ನಿವಾಸಿಗಳು, ಬಾತ್ ರೂಂ ನೀರು ರಸ್ತೆಯಲ್ಲಿ ನಿಂತಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡಿ ಓಡಾಡುತ್ತಿದ್ದಾರೆ. ಕುಡಿಯುವ ನೀರಿನ ಪೈಪ್ ಅಳವಡಿಸಲು ತೆರೆಯಲಾಗಿದ್ದ ಹಳ್ಳಕ್ಕೆ ಚರಂಡಿ ನೀರು ಸೇರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದರು.
ಇದನ್ನೂ ಓದಿ:ದಾಸರಹಳ್ಳಿಯಲ್ಲಿ 127 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ಗೆ ಚಾಲನೆ
ಬಳಿಕ ಮಾಜಿ ಅಧ್ಯಕ್ಷ, ನಗರಸಭೆ ಆಯುಕ್ತ ವಿಜಯ್ಗೆ ಕರೆ ಮಾಡಿ ಸ್ಥಳಕ್ಕೆ ಧಾವಿಸುವಂತೆ ಸಮಸ್ಯೆ ಖುದ್ದು ನೋಡುವಂತೆ ತಿಳಿಸಿದ್ದಾರೆ. ಕೂಡಲೇ ನಗರಸಭೆಯ ಆರೋಗ್ಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಆಯುಕ್ತ ವಿಜಯ ಪರಿಶೀಲನೆ ನಡೆಸಿದರು. ಈ ವೇಳೆ, ಮಾಜಿ ಅಧ್ಯಕ್ಷ ರಮೇಶ್ 15 ದಿನ ಬೇಕಾ ಈ ಕೆಲಸ ಮಾಡಿಸೋಕೆ? ನಗರದ ಸ್ವಚ್ಛತೆ ಕಾಪಾಡದೆ ನಗರಸಭೆ ಕಣ್ಮುಚ್ಚಿ ಕುಳಿತಿರುವುದೇಕೆ, ಇಷ್ಟು ದಿನ ಎಲ್ಲಿಗೆ ಹೋಗಿದ್ರಿ ಎಂದು ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.
ಅವೈಜ್ಞಾನಿಕ ಒಳಚರಂಡಿ ವ್ಯವಸ್ಥೆಯಿಂದ ಜಟಾಪಟಿ ಈ ವೇಳೆ ಮಧ್ಯಪ್ರವೇಶಿಸಿದ 7ನೇ ವಾರ್ಡ್ ನಗರಸಭೆ ಹಾಲಿ ಸದಸ್ಯ ನಾಸಿರ್ ಶರೀಫ್, ಈ ಬಗ್ಗೆ ನಾನು ಹೇಳಿದ್ದೇನೆ. ಇದೀಗ ಸರಿ ಮಾಡಲಾಗುತ್ತಿದೆ ಎಂದು ಹೇಳುತ್ತಿದಂತೆ ಮಾತಿಗೆ ಮಾತು ಬೆಳೆದು ಮಾಜಿ ಅಧ್ಯಕ್ಷ ರಮೇಶ್ ಹಾಗೂ ಹಾಲಿ ಸದಸ್ಯ ನಾಸಿರ್ ಶರೀಫ್ ನಡುವೆ ಜಟಾಪಟಿ ನಡೆದು ಅವಾಚ್ಯ ಶಬ್ಧಗಳಿಂದ ಒಬ್ಬರನ್ನೊಬ್ಬರು ನಿಂದಿಸಿಕೊಂಡ ಘಟನೆ ನಡೆಯಿತು. ಪರಿಸ್ಥಿತಿ ಗಂಭೀರವಾಗುತ್ತಿದಂತೆ ಸಮಾಧಾನಪಡಿಸಲು ಬಂದ ಆಯುಕ್ತರನ್ನು ನಿವಾಸಿಗಳು ಹಾಗೂ ಮಾಜಿ ಅಧ್ಯಕ್ಷ ರಮೇಶ್ ತೀವ್ರ ತರಾಟೆಗೆ ತೆಗೆದುಕೊಂಡು ತಕ್ಷಣ ಸಮಸ್ಯೆ ಬಗೆಹರಿಸುವಂತೆ ಆಕ್ರೋಶ ಹೊರಹಾಕಿದರು. ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಗುಂಪುಗೂಡಿದ ಜನರನ್ನು ಚದುರಿಸಿದರು.
ಇದನ್ನೂ ಓದಿ: ಕರ್ಫ್ಯೂ ಉಲ್ಲಂಘನೆ: ಪೊಲೀಸ್ ಸಿಬ್ಬಂದಿಯನ್ನೇ ತರಾಟೆಗೆ ತೆಗೆದುಕೊಂಡ ಸಂಚಾರಿ ಎಎಸ್ಐ