ನಾಯ್ ಪೈ ಟಾವ್ (ಮ್ಯಾನ್ಮಾರ್):ಮ್ಯಾನ್ಮಾರ್‌ನ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಸೂಕಿ ಅವರು ದೇಶದ್ರೋಹದ ಆರೋಪವನ್ನು ಎದುರಿಸುತ್ತಿದ್ದಾರೆ. ಜೊತೆಗೆ ಅರಾಜ್ಯ ರಹಸ್ಯ ಕಾನೂನುಗಳ ಉಲ್ಲಂಘನೆ ಮತ್ತು ಕೊರೊನಾ ಮುಂಜಾಗೃತಾ ಕ್ರಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಡಿಪಿಎ ಸುದ್ದಿ ಸಂಸ್ಥೆ ವರದಿ ಮಾಡಿದೆ. ವಿಚಾರಣೆಯ ಮೊದಲು ವಕೀಲರು ಸೂಕಿ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದಾರೆ. ಅವರು ಕಾನೂನು ವಿಷಯದ ಬಗ್ಗೆ ಚರ್ಚಿಸಿದ್ದಾರೆ ಎಂದು ರಕ್ಷಣಾ ವಕೀಲ ಥೇ ಮಾಂಗ್ ಮಾಂಗ್ ಹೇಳಿದ್ದಾರೆ.
ನ್ಯಾಯಾಲಯದ ಮುಂದಿನ ವಿಚಾರಣೆಯನ್ನು ಜೂನ್ 7ರಂದು ನಿಗದಿಪಡಿಸಲಾಗಿದೆ. ಕಳೆದ ಕೆಲ ವಾರಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸೂಕಿ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಇನ್ನು ಸೂಕಿ ಅವರ ಮನೆಯಿಂದ ದೂರದಲ್ಲಿರುವ ರಾಜಧಾನಿ ನಾಯ್ ಪೈ ಟಾವ್‌ನಲ್ಲಿ ವಿಚಾರಣೆಗೆ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ ಎಂದು ವಕೀಲ ಮಿನ್ ಮಿನ್ ಸೋ ಡಿಪಿಎಗೆ ತಿಳಿಸಿದರು.
ಮ್ಯಾನ್ಮಾರ್‌ನಲ್ಲಿ 2020ರ ನವೆಂಬರ್‌ನಲ್ಲಿ ಚುನಾವಣೆ ನಡೆದಿತ್ತು. ಸೂಕಿ ನೇತೃತ್ವದಲ್ಲಿ ಅವರ ಪಕ್ಷ ಭರ್ಜರಿ ಗೆಲುವು ಸಾಧಿಸಿತ್ತು. ಚುನಾವಣೆಯಲ್ಲಿ ಮ್ಯಾನ್ಮಾರ್ ಸಂಸತ್ತಿನ 642 ಸ್ಥಾನಗಳ ಪೈಕಿ ಸೂಕಿ ನೇತೃತ್ವದ ಎನ್‌ಎಲ್‌ಡಿ ಪಕ್ಷ 396 ಸ್ಥಾನ ಪಡೆದಿತ್ತು. ಆದರೆ ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತ ವಿರುದ್ಧ ಸತತ ಹೋರಾಟ ನಡೆಸಿದ್ದ ಸೂಕಿಗೆ ಇದೀಗ ಹಿನ್ನಡೆಯಾಗಿದೆ. ಸೂಕಿ ಬಂಧನ ಹಲವು ಅನುಮಾನಗಳಿಗೂ ಕಾರಣವಾಗಿದೆ.