ಕರ್ನಾಟಕ

karnataka

ETV Bharat / briefs

ರಾಜ್ಯದ ಕೋವಿಡ್ ಪರಿಸ್ಥಿತಿ ಸಂಬಂಧ ಮಹತ್ವದ ವಿಚಾರಗಳ ಚರ್ಚೆ ನಡೆಸಿದ ಸುರ್ಜೆವಾಲಾ - ಡಿಕೆಶಿ

ಎಲ್ಲೆಲ್ಲಿ ಸೋಂಕಿತರಿಗೆ ಹಾಸಿಗೆ ಸಿಗುತ್ತಿಲ್ಲವೋ, ಅಲ್ಲೆಲ್ಲ ಹೆಚ್ಚುವರಿ ಹಾಸಿಗೆ ವ್ಯವಸ್ಥೆ ಕಲ್ಪಿಸಿ, ಆಮ್ಲಜನಕ ಪೂರೈಕೆ ಮಾಡಬೇಕು. ಈ ಎಲ್ಲವನ್ನು ಮುಂದಿನ ಎರಡರಿಂದ ಮೂರು ದಿನಗಳಲ್ಲಿ ಆರಂಭಿಸಬೇಕು.

DK Shivakumar
DK Shivakumar

By

Published : Apr 27, 2021, 9:41 PM IST

Updated : Apr 27, 2021, 10:37 PM IST

ಬೆಂಗಳೂರು:ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ರಣದೀಪ್ ಸಿಂಗ್ ಸುರ್ಜೇವಾಲ ಇಂದು ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಜೊತೆ ವಿಡಿಯೋ ಸಂವಾದ ನಡೆಸಿದರು.

ಉಭಯ ನಾಯಕರು ಸುದೀರ್ಘ ಚರ್ಚೆ ನಡೆಸಿದ ಸಂದರ್ಭ ಕರ್ನಾಟಕದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಯಡಿಯೂರಪ್ಪ ಅವರ ಸರ್ಕಾರ ತನ್ನ ಜವಾಬ್ದಾರಿಯಿಂದ ಜಾರಿಕೊಳ್ಳುವ ಮೂಲಕ ಬೆಂಗಳೂರು ಹಾಗೂ ರಾಜ್ಯದ ಜನರನ್ನು ನಡು ನೀರಲ್ಲಿ ಕೈಬಿಟ್ಟಿದೆ. ದೇಶದ ಐಟಿ ರಾಜಧಾನಿ ಎಂದೇ ಪರಿಗಣಿಸಲ್ಪಟ್ಟಿರುವ ಬೆಂಗಳೂರು ಈಗ ದೇಶದಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿತ ನಗರವಾಗಿದೆ. ಸೋಂಕಿತರಿಗೆ ಹಾಸಿಗೆ, ಆಕ್ಸಿಜನ್, ಔಷಧ, ಆ್ಯಂಬುಲೆನ್ಸ್, ವೈದ್ಯಕೀಯ ಸೇವೆ ಪೂರೈಸುವಲ್ಲಿ ಮಾತ್ರವಲ್ಲ ಸತ್ತವರಿಗೆ ಅಂತ್ಯ ಸಂಸ್ಕಾರ ಮಾಡಲು ಅವಕಾಶ ನೀಡಲು ಸರ್ಕಾರ ವಿಫಲವಾಗಿದೆ. ಇದು ರಾಜ್ಯದ ಜನರಿಗೆ ಬಿಜೆಪಿ ಸರ್ಕಾರ ಬಗೆದಿರುವ ದ್ರೋಹ ಎಂಬ ವಿಷಯವನ್ನು ಚರ್ಚಿಸಿದ್ದಾರೆ.

ರಾಜ್ಯದ ಕೋವಿಡ್ ಪರಿಸ್ಥಿತಿ ಸಂಬಂಧ ಮಹತ್ವದ ವಿಚಾರಗಳ ಚರ್ಚೆ ನಡೆಸಿದ ಸುರ್ಜೆವಾಲಾ - ಡಿಕೆಶಿ

ಈ ಸಂದರ್ಭದಲ್ಲಿ ರಾಜ್ಯದ ಜನರ ಜವಾಬ್ದಾರಿಯನ್ನು ಕಾಂಗ್ರೆಸ್ ಪಕ್ಷ ಹೊತ್ತಿದೆ. ಹೀಗಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಕಂಟ್ರೋಲ್ ರೂಮ್ ಹಾಗೂ ಸಹಾಯವಾಣಿ ಆರಂಭಿಸಬೇಕು. ಆ ಮೂಲಕ ಜನರಿಗೆ ಆ್ಯಂಬುಲೆನ್ಸ್ ಹಾಗೂ ಇತರೆ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು. ಕೋವಿಡ್ ನಿರ್ಬಂಧದಿಂದ ತೊಂದರೆ ಅನುಭವಿಸುತ್ತಿರುವ ಪ್ರತೀ ಮನೆಗಳಿಗೂ ಆಹಾರ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು. ಆಕ್ಸಿಜನ್ ಪೂರೈಕೆ ಹಾಗೂ ರೆಮ್ಡೆಸಿವಿರ್, ಪ್ಯಾರಾಸಿಟಮಲ್ ಹಾಗೂ ಇತರ ಔಷಧಗಳು ಅಗತ್ಯ ರೋಗಿಗಳಿಗೆ ಸಿಗುವಂತೆ ಮಾಡಬೇಕು. ಕಾಂಗ್ರೆಸ್ ಪಕ್ಷದ ಜೊತೆ ಇರುವ ವೈದ್ಯರಿಂದ ಸೋಂಕಿತರಿಗೆ ಅಗತ್ಯ ವೈದ್ಯಕೀಯ ಮಾರ್ಗದರ್ಶನ ನೀಡಬೇಕು. ವೈದ್ಯರಿಗೆ ಪಿಪಿಇ ಕಿಟ್, ಜನರಿಗೆ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ:14 ದಿನ ರಾಜ್ಯದಲ್ಲಿ ಕಠಿಣ ಕರ್ಫ್ಯೂ..ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಿಷ್ಟು!

ಇನ್ನು ಎಲ್ಲೆಲ್ಲಿ ಸೋಂಕಿತರಿಗೆ ಹಾಸಿಗೆ ಸಿಗುತ್ತಿಲ್ಲವೋ, ಅಲ್ಲೆಲ್ಲ ಹೆಚ್ಚುವರಿ ಹಾಸಿಗೆ ವ್ಯವಸ್ಥೆ ಕಲ್ಪಿಸಿ, ಆಮ್ಲಜನಕ ಪೂರೈಕೆ ಮಾಡಬೇಕು. ಈ ಎಲ್ಲವನ್ನು ಮುಂದಿನ ಎರಡರಿಂದ ಮೂರು ದಿನಗಳಲ್ಲಿ ಆರಂಭಿಸಬೇಕು. ದಿನಗೂಲಿ ನೌಕರರು, ವ್ಯಾಪಾರಿಗಳಿಗೆ, ಚಾಲಕರಿಗೆ ಆಗುತ್ತಿರುವ ನಷ್ಟಕ್ಕೆ ಸರ್ಕಾರ ಪರಿಹಾರ ಪ್ಯಾಕೇಜ್ ಘೋಷಿಸುವಂತೆ ಸರ್ಕಾರಕ್ಕೆ ಆಗ್ರಹಿಸಬೇಕು. ಈ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರು ಮುಖ್ಯಮಂತ್ರಿಗಳಿಗೆ ಧ್ವನಿ ಎತ್ತಬೇಕು. ಲಸಿಕೆ ಪೂರೈಕೆ ವಿಚಾರದಲ್ಲೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಎಲ್ಲ ಜನರಿಗೆ ಲಸಿಕೆ ಉಚಿತವಾಗಿ ಶೀಘ್ರ ಸಿಗುವಂತೆ ಆಗ್ರಹಿಸಬೇಕು. ಈ ವಿಚಾರಗಳನ್ನು ಆದ್ಯತೆ ಮೇರೆಗೆ ತೆಗೆದುಕೊಳ್ಳಬೇಕು ಎಂಬ ವಿಚಾರವಾಗಿ ಚರ್ಚಿಸಿದ್ದಾರೆ.

ಡಿ.ಕೆ ಶಿವಕುಮಾರ್ ಮಾತು

ನೀವು ಕೊಟ್ಟ ಎಲ್ಲ ಸಲಹೆಗಳನ್ನು ನಾವು ಪಾಲಿಸುತ್ತೇವೆ. ಇದೇ ವೇಳೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಾವು ಆರ್ಡರ್ ಮಾಡಿರುವ ಎಲ್ಲಾ ಔಷಧಗಳನ್ನು ತಡೆಹಿಡಿದಿದೆ. ಇದಕ್ಕೆ 15 ದಿನಗಳ ಕಾಲಾವಕಾಶ ತೆಗೆದುಕೊಳ್ಳಬಹುದು. ನಿನ್ನೆ ನಾನು ಎಂ.ಬಿ ಪಾಟೀಲರ ಜತೆ ಸಭೆ ನಡೆಸಿದ್ದೆ. ನಮ್ಮ ನಾಯಕರ ವೈದ್ಯಕೀಯ ಸಂಸ್ಥೆಗಳಿಗೆ ರೆಮಿಡಿಸಿವಿರ್ ಪೂರೈಕೆಯಾಗುತ್ತಿಲ್ಲ. ಈ ವಿಚಾರವಾಗಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಆರೋಗ್ಯ ಇಲಾಖೆ ಕಾರ್ಯದರ್ಶಿಗಳ ಜತೆ ಚರ್ಚಿಸಿದ್ದು, ಔಷಧಿ ಪೂರೈಕೆ ಮಾಡದೆ ಚಿಕಿತ್ಸೆ ನೀಡುವುದಾದರೂ ಹೇಗೆ ಎಂದು ಕೇಳಲಾಗಿದೆ. ಆ ಸಮಯದಲ್ಲಿ ವೈದ್ಯಕೀಯ ಸಂಸ್ಥೆಗಳನ್ನು ನಡೆಸುತ್ತಿರುವ ನಮ್ಮ ನಾಯಕರಾದ ಪರಮೇಶ್ವರ್ ಹಾಗೂ ಇತರರು, ಸಿಎಲ್​ಪಿ ನಾಯಕರು ಹಾಗೂ ಇತರ ಹಿರಿಯ ನಾಯಕರ ಜತೆ ಕೂತು ಈ ಬಗ್ಗೆ ಚರ್ಚೆ ಮಾಡುತ್ತೇವೆ. ಈ ಸಭೆಯಲ್ಲಿ ಭಾಗವಹಿಸಿದ ಎಲ್ಲ ನಾಯಕರಿಗೂ ನಾನು ಧನ್ಯವಾದ ತಿಳಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಎಸ್.ಬಿ ಸಿದ್ನಾಳ್ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಇದನ್ನೂ ಓದಿ:ರಾಜ್ಯಕ್ಕೆ ಕೋವಿಡ್ ಡಬಲ್ ಮ್ಯುಟೆಂಟ್: 20 ಜನರಲ್ಲಿ ಕಾಣಿಸಿಕೊಂಡಿರುವ ಸೋಂಕು

Last Updated : Apr 27, 2021, 10:37 PM IST

ABOUT THE AUTHOR

...view details