ಹೈದರಾಬಾದ್: ವಾರ್ನರ್ ಹಾಗೂ ಜಾನಿ ಬ್ಯಾರ್ಸ್ಟೋವ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಹೈದರಾಬಾದ್ ತಂಡ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಕೆಕೆಆರ್ ನೀಡಿದ 159 ರನ್ಗಳ ಗುರಿಯನ್ನು ಬೆನ್ನೆತ್ತಿದ ಹೈದರಾಬಾದ್ ಆರಂಭದಿಂದಲೇ ಅಬ್ಬರದ ಆಟಕ್ಕೆ ಮೊರೆ ಹೋಯಿತು. ಪವರ್ ಪ್ಲೇನಲ್ಲಿ ಆರಂಭಿಕರಿಬ್ಬರ ಆಟದ ಮುಂದೆ ಕೆಕೆಆರ್ ಬೌಲರ್ಗಳ ಆಟ ನಡೆಯಲಿಲ್ಲ. ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ 38 ಎಸೆತಗಳಲ್ಲಿ 67 ರನ್ಗಳಿಸಿದರು. ಇದರಲ್ಲಿ 5 ಸಿಕ್ಸರ್ 3 ಬೌಂಡರಿ ಒಳಗೊಂಡಿತ್ತು. ವಾರ್ನರ್ ಇಂದೇ ತನ್ನ ಮೊದಲ ಪಂದ್ಯವಾಡಿದ ಯರ್ರ್ ಪೃಥ್ವಿರಾಜ್ಗೆ ವಿಕೆಟ್ ಒಪ್ಪಿಸಿದರು. ಆದರೆ, ಜಾನಿ ಬೈರ್ಸ್ಟೋವ್ ಮಾತ್ರ ತನ್ನ ಅಬ್ಬರದ ಆಟವನ್ನು ಮುಂದುವರಿಸಿ 43 ಎಸೆತಗಳಲ್ಲಿ 7 ಬೌಂಡರಿ 4 ಸಿಕ್ಸರ್ ಸಹಿತ 80 ರನ್ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ವಿಲಿಯಮ್ಸನ್ ಔಟಾಗದೆ 9 ರನ್ಗಳಿಸಿದರು.
ಕೆಕೆಆರ್ ರನ್ಗಳಿಸಲು ಪರದಾಡಿದ ಇದೇ ಪಿಚ್ನಲ್ಲಿ ಲೀಲಾಜಾಲವಾಗಿ ರನ್ಗಳಿಸಿದ ವಾರ್ನರ್ ಹಾಗೂ ಬ್ಯಾರ್ಸ್ಟೋವ್ ಮೊದಲ ವಿಕೆಟ್ಗೆ 12.2 ಓವರ್ಗಳಲ್ಲಿ 131 ರನ್ಗಳ ಸೂರೆಗೈದರು. 15 ಓವರ್ಗಳಲ್ಲಿ ಕೆಕೆಆರ್ ನೀಡಿದ್ದ 159 ರನ್ಗಳ ಗುರಿಯನ್ನು ತಲುಪಿ ಅಂಕಪಟ್ಟಿಯಲ್ಲಿ 4 ನೇ ಸ್ಥಾನಕ್ಕೆ ಲಗ್ಗೆ ಇಟ್ಟರು.