ಮಂಗಳೂರು:ದೇಶದಲ್ಲಿಲೋಕಸಭಾ ಚುನಾವಣೆ ನಡೆಯುತ್ತಿದ್ದು, ಮಾಧ್ಯಮ, ಗುಪ್ತಚರ ಇಲಾಖೆ ಅಂಕಿ-ಅಂಶಗಳ ಪ್ರಕಾರ ಮೇ 23 ರಂದು ನಡೆಯುವ ಫಲಿತಾಂಶದ ಪ್ರಕಾರ ಜೆಡಿಎಸ್ ಒಂದೇ ಒಂದು ಸ್ಥಾನವನ್ನು ಗೆಲುವುದಿಲ್ಲ. ಕಾಂಗ್ರೆಸ್ ಹೀನಾಯ ಸೋಲು ಕಾಣಲಿದೆ ಎಂದು ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಮಂತ್ರಿ ವರ್ಗಗಳಲ್ಲಿ ಮಾನಸಿಕ ತುಮುಲ ಉಂಟಾಗಿದೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ತಿಳಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಪರ ಇರುವ ಬರಹಗಾರರು ಮತ್ತು ಪತ್ರಕರ್ತರನ್ನು ಬಂಧಿಸುತ್ತಿರುವ ಮೈತ್ರಿ ಸರ್ಕಾರದ ಧೋರಣೆಯನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಸಮ್ಮಿಶ್ರ ಸರಕಾರ ಪತನಗೊಳ್ಳುತ್ತದೆಂಬ ಕಾರಣದಿಂದ ಇರುವಷ್ಟು ದಿನ ಗೊಂದಲ ಸೃಷ್ಟಿ ಮಾಡಿ ಸೀಟ್ ಉಳಿಸಿಕೊಳ್ಳಲು, ಸಾಮಾಜಿಕ ಜಾಲತಾಣಗಳ ಹೋರಾಟಗಾರರನ್ನು ಬಂಧಿಸುವ ಹೀನಾಯ ಕಾರ್ಯವನ್ನು ರಾಜ್ಯ ಸರಕಾರ ಮಾಡುತ್ತಿದೆ. ಇದು ಹಿಂದಿನಿಂದ ತುರ್ತು ಪರಿಸ್ಥಿತಿಯನ್ನು ಸೃಷ್ಟಿ ಮಾಡುವ ತಂತ್ರಗಾರಿಕೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಹಾಲಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಹಿಂದೆ ನೆಹರೂರವರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧಿಸಲು ಹೊರಟಿದ್ದರು. ಆದರೆ ಅದರಲ್ಲಿ ನೆಹರೂ ಸಫಲರಾಗಲಿಲ್ಲ.ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಹೇರಿದರು. ವಿರೋಧ ಪಕ್ಷಗಳ, ಮಾಧ್ಯಮಗಳ ಬಾಯಿ ಮುಚ್ಚಿಸುವ ಕೆಲಸ ಮಾಡಿದರು. ಪರಿಣಾಮ ಇಂದಿರಾ ಗಾಂಧಿಯೇ ಜೈಲಿಗೆ ಹೋಗುವ ಪರಿಸ್ಥಿತಿ ಬಂತು. ಇಂದು ಇದೇ ಪ್ರಯೋಗವನ್ನು ಎಂ.ಬಿ.ಪಾಟೀಲ್ ಮಾಡುತ್ತಿದ್ದಾರೆ. ಮೇ 23 ರಂದು ನೆಟಿಜನ್ಸ್ ಜೈಲಿನಲ್ಲಿರುವುದಿಲ್ಲ ಎಂ.ಬಿ.ಪಾಟೀಲ್ ಜೈಲಿನಲ್ಲಿರುತ್ತಾರೆ. ಇಂದು ಈ ರಾಜ್ಯದಲ್ಲಿ ಅಧಿಕಾರದ ದುರುಪಯೋಗ ಆಗುತ್ತಿದೆ. ಆದ್ದರಿಂದ ಮೇ 23ರಂದು ಎಲ್ಲಾ ಸ್ಥಾನಗಳು ಬಿಜೆಪಿ ಕೈ ವಶವಾಗುತ್ತವೆ. 24 ರಂದು ಸಮ್ಮಿಶ್ರ ಸರಕಾರ ಪತನಗೊಳ್ಳುತ್ತದೆ ನಳಿನ್ ಕುಮಾರ್ ಕಟೀಲು ಭವಿಷ್ಯ ನುಡಿದರು.
ರಾಜ್ಯದಲ್ಲಿ ಬರ ಇದೆ ನೀರಿಗೆ ಹಾಹಾಕಾರ ನಡೆಯುತ್ತಿದೆ. ಮಂಗಳೂರಿನಲ್ಲಿಯೂ ನೀರಿನ ಬರ ಇದೆ. ಆದರೆ ಸಿಎಂ ಕುಮಾರಸ್ವಾಮಿಯವರು ಮಾತ್ರ ಆರಾಮ ಸ್ವಾಮಿಯಾಗಿದ್ದಾರೆ. ರಾಜ್ಯ ಹೇಗೆ ನಡೆಯುತ್ತಿದೆ ಎಂದು ಅವರಿಗೆ ಗೊತ್ತಿಲ್ಲ. ಸರಕಾರ ಹೇಗೆ ನಡೆಯುತ್ತಿದೆ ಎಂಬುದು ಅವರಿಗೆ ಗೊತ್ತಿಲ್ಲ. ಅವರು ಪಕ್ಕದ ಉಡುಪಿಯಲ್ಲಿ ಆರಾಮವಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮಂಗಳೂರಿನಲ್ಲಿ ಏನಾಗಿದೆ ಎಂದು ಒಂದೇ ಒಂದು ದಿನ ಅಧಿಕಾರಿಗಳ ಸಭೆ ಕರೆದಿಲ್ಲ. ಮಂಗಳೂರಿನಲ್ಲಿ ಬರದ ಪರಿಸ್ಥಿತಿ ಬರಲು ಕಾಂಗ್ರೆಸ್ ಸರಕಾರವೇ ಕಾರಣ ಎಂದು ನಳಿನ್ ಕುಮಾರ್ ಆರೋಪಿಸಿದರು.