ಬೆಂಗಳೂರು:ಸರ್ಕಾರ ವಿದ್ಯುತ್ ದರ ಏರಿಸಿದೆ. ಯೂನಿಟ್ ವಿದ್ಯುತ್ ಮೇಲೆ 30 ಪೈಸೆ ಏರಿಸಲಾಗಿದೆ. ಏ. 1ರಿಂದ ದರ ಪೂರ್ವಾನ್ವಯವೂ ಆಗಲಿದೆ. ಹಿಂಬಾಕಿಯನ್ನು ಅಕ್ಟೋಬರ್–ನವೆಂಬರ್‌ನಲ್ಲಿ ವಸೂಲಿ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಗರಂ ಆಗಿದ್ದಾರೆ.
ಕೊರೊನಾ ಕಾಲದಲ್ಲಿ ಹಲವು ರಾಜ್ಯಗಳು ವಿದ್ಯುತ್ ಬಿಲ್ ರದ್ದು ಮಾಡಿರುವಾಗ ರಾಜ್ಯ ಸರ್ಕಾರ ದರ ಏರಿಕೆ ಜೊತೆ ಬಾಕಿ ವಸೂಲಿಗೂ ನಿಂತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೋವಿಡ್ ಮತ್ತು ಲಾಕ್ಡೌನ್ಗಳಲ್ಲಿ ಜನ ಕಷ್ಟಪಟ್ಟು ಜೀವ ಉಳಿಸಿಕೊಂಡಿದ್ದಾರೆ. ಕಷ್ಟದ ಜೀವನ ನಡೆಸಿದ್ದಾರೆ. ಇನ್ನಷ್ಟೇ ದುಡಿದು ಜೀವನ ನಡೆಸಬೇಕಾದ ಜನರ ಮೇಲೆ ಸರ್ಕಾರಕ್ಕೆ ಏಕೆ ದ್ವೇಷ? ಲಾಕ್‌ಡೌನ್ ಘೋಷಿಸಿದ್ದ ಸರ್ಕಾರ ವಾಸ್ತವದಲ್ಲಿ ವಿದ್ಯುತ್, ನೀರಿನ ಬಿಲ್ ಅನ್ನು 3 ತಿಂಗಳು ರದ್ದು ಮಾಡಬೇಕಿತ್ತು. ಆದರೀಗ ವಸೂಲಿ ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ಹಲವು ದೇಶಗಳಲ್ಲಿ, ಅಷ್ಟೇ ಏಕೆ... ಪಕ್ಕದ ಕೇರಳ, ತಮಿಳುನಾಡು ರಾಜ್ಯಗಳಲ್ಲಿ ವಿದ್ಯುತ್ ಬಿಲ್ ತಡೆಯಲಾಗಿದೆ. ಅಥವಾ ಕಡಿಮೆ ಮಾಡಲಾಗಿದೆ. ಕೋವಿಡ್ ಪ್ಯಾಕೇಜ್‌ನಲ್ಲಿ ಇದನ್ನು ಘೋಷಿಸಲಾಗಿದೆ. ಪ್ಯಾಕೇಜ್‌ನಲ್ಲಿ ಸಾಮಾನ್ಯ ಜನರನ್ನು ವಂಚಿಸಿದ ರಾಜ್ಯದ ಬಿಜೆಪಿ ಸರ್ಕಾರ ಈಗ ದರ ಏರಿಕೆ, ಬಾಕಿ ವಸೂಲಿ ಮೂಲಕ ದೌರ್ಜನ್ಯದ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರ ಪೆಟ್ರೋಲಿಯಂ ದರ ಏರಿಸಿ ಜನರನ್ನು ಸುಲಿಯುತ್ತಿದ್ದರೆ, ಇಲ್ಲಿನ ಬಿಜೆಪಿ ಸರ್ಕಾರ ವಿದ್ಯುತ್ ದರ ಏರಿಸಿ ಹಿಂಡುತ್ತಿದೆ. ಬಸ್ ಟಿಕೆಟ್ ದರ ಏರಿಸುವ ಮುನ್ಸೂಚನೆ ನೀಡಿದೆ. ಜನರಿಗೆ ಬಿಜೆಪಿ ತೋರಿದ ಅಚ್ಚೇ ದಿನದ ಕನಸು ಇದೇನಾ? ಅದು ಕನಸಾಗಿ ಉಳಿದಿದ್ದರೆ ಚನ್ನಾಗಿರುತ್ತಿತ್ತು. ಈಗ ದುಃಸ್ವಪ್ನವಾಗಿ ಕಾಡುತ್ತಿದೆ ಎಂದು ಟೀಕಿಸಿದ್ದಾರೆ.
‘ನಷ್ಟ ಸರಿದೂಗಿಸಲು, ಸಂಪನ್ಮೂಲ ಸಂಗ್ರಹಿಸಲು ದರ ಏರಿಕೆ ಅನಿವಾರ್ಯ,‘ ಎಂಬ ಸಿದ್ಧ ಉತ್ತರವನ್ನು ಸರ್ಕಾರ ಹೇಳಬಾರದು. ಕರ್ನಾಟಕದ ಆರ್ಥಿಕ ಪರಿಸ್ಥಿತಿ, ಸಂಪನ್ಮೂಲ ಉತ್ತಮವಾಗಿಯೇ ಇದೆ. ಎರಡು ಬಾರಿ ಸಿಎಂ ಆದ ನನಗೆ ಅದರ ಸ್ಪಷ್ಟ ಅರಿವಿದೆ. ತಿಂದು ತೇಗುವುದನ್ನು ನಿಲ್ಲಿಸಿದರೆ ದರ ಏರಿಕೆಯೇ ಬೇಕಿಲ್ಲ. ಈಗಿನ ವಿದ್ಯುತ್ ದರ ಏರಿಕೆಯೂ ಅನಗತ್ಯ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.