ಮಂಡ್ಯ :ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರಕ್ಕೆ ಕೀರ್ತಿ ತಂದು ಕೊಟ್ಟ ಮಂಡ್ಯ ಜಿಲ್ಲೆಯ ಮಮತಾ ಶೆಟ್ಟಿ, ಸವಿತಾ, ಪವಿತ್ರ, ಭವ್ಯ ಅವರಂತೆ, ನಾವೂ ಸಾಧಿಸಬೇಕು ಎಂಬ ಹಂಬಲದಲ್ಲಿರುವ ಮಂಡ್ಯದ ಕ್ರೀಡಾ ವಿದ್ಯಾರ್ಥಿನಿಯರಿಗೆ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಜಿಲ್ಲೆಯಲ್ಲಿ ಇದೇ ಮೊದಲು ಬಾಲಕಿಯರ ಕ್ರೀಡಾ ವಸತಿ ನಿಲಯ ಮಂಜೂರು ಮಾಡಿ ಸರ್ಕಾರ ಆದೇಶಿಸಿದೆ.
ಕ್ರೀಡೆಯಲ್ಲಿ ಸಾಧನೆಯತ್ತ ನಿಮ್ಮ ಗುರಿ ಇರಲಿ. ಅದಕ್ಕೆ ಬೇಕಾದ ಎಲ್ಲ ಬೆಂಬಲ ನೀಡಲು ಸರ್ಕಾರ ಸಿದ್ಧ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಕ್ರೀಡಾಪಟುಗಳಿಗೆ ಆಶ್ವಾಸನೆ ನೀಡಿದ್ದರು. ಅದರಂತೆ ಮಂಡ್ಯ ಜಿಲ್ಲಾ ಕ್ರೀಡಾಂಗಣವನ್ನು 10 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಮಾಡುತ್ತಿದ್ದಾರೆ. ‘ಖೇಲೊ ಇಂಡಿಯಾ’ ಅಡಿ ಖೇಲೊ ಇಂಡಿಯಾ ಕೇಂದ್ರ ಕೂಡ ಸ್ಥಾಪನೆ ಆಗುತ್ತಿದೆ. ಇದೆಲ್ಲಕ್ಕಿಂತ ಪ್ರಮುಖವಾಗಿ ವೈಜ್ಞಾನಿಕವಾಗಿ ಕ್ರೀಡಾಪಟುಗಳಲ್ಲಿರುವ ಕ್ರೀಡಾ ಸಾಮರ್ಥ್ಯ ಗುರುತಿಸುವ ಕ್ರೀಡಾ ವಿಜ್ಞಾನ ಕೇಂದ್ರ 2 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆಯಾಗುತ್ತಿದೆ.
ಸರ್ಕಾರದ ಮಂಜೂರಾತಿ ಆದೇಶ ಪತ್ರ "ಬಾಲಕಿಯರ ವಸತಿ ನಿಲಯ":ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತಿತ್ತು. ಆದರೂ ವಸತಿ ನಿಲಯವೇ ಇಲ್ಲದ ಕಾರಣ ಗ್ರಾಮೀಣ ಭಾಗದ ಕ್ರೀಡಾಪ್ರತಿಭೆಗಳಿಗೆ ಅವಕಾಶ ಮರೀಚಿಕೆಯಾಗಿತ್ತು. ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ವಿದ್ಯಾಭ್ಯಾಸದ ಜೊತೆ ಕ್ರೀಡೆಯಲ್ಲೂ ತೊಡಗಿಸಿಕೊಳ್ಳುವುದಕ್ಕೆ ಬಹಳ ಕಠಿಣ ಪರಿಸ್ಥಿತಿ ಇತ್ತು. ಬಾಲಕಿಯರೂ ಕ್ರೀಡೆಯಲ್ಲಿ ಸಾಧನೆ ಮಾಡಿ ತೋರಿಸುವುದಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಜಿಲ್ಲೆಗೆ 2 ಕೋಟಿ ರೂ. ವೆಚ್ಚದಲ್ಲಿ ಬಾಲಕಿಯರ ಕ್ರೀಡಾ ವಸತಿ ನಿಲಯವನ್ನು ಮಂಜೂರು ಮಾಡಿಸಿದ್ದಾರೆ.
ಸರ್ಕಾರದ ಮಂಜೂರಾತಿ ಆದೇಶ ಪತ್ರ 'ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳ ಸಾಧನೆ' :ಜಿಲ್ಲೆಯಲ್ಲಿ ಕ್ರೀಡಾಪ್ರತಿಭೆಗಳಿಗೆ ಬರವಿಲ್ಲ ಎನ್ನುವುದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರಿಸಿದ ಸಾಧನೆಗಳೇ ಸಾಕ್ಷಿ. ವಾಲಿಬಾಲ್‍ನಲ್ಲಿ ಮಮತಾ ಶೆಟ್ಟಿ ಹಾಗೂ ಪವಿತ್ರ, ಬಾಸ್ಕೆಟ್‍ಬಾಲ್‍ನಲ್ಲಿ ಸವಿತಾ, ಕಬ್ಬಡ್ಡಿಯಲ್ಲಿ ಭವ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿ ಕೀರ್ತಿ ಪತಾಕೆ ಹಾರಿಸಿದ್ದಾರೆ. ವಿಪರ್ಯಾಸ ಎಂದರೆ ಇಂತಹ ಸಾಧಕರ ತವರು ಜಿಲ್ಲೆಯಲ್ಲೇ ಬಾಲಕಿಯರಿಗೆ ಕ್ರೀಡಾ ವಸತಿ ನಿಲಯ ಇರಲಿಲ್ಲ.
ಈಗ ಸರ್ಕಾರ ವಸತಿ ನಿಲಯ ಮಂಜೂರು ಮಾಡಿದೆ. ಹೀಗಾಗಿ, ಈ ಎಲ್ಲ ಕ್ರೀಡಾ ಸಾಧಕರಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ವಿದ್ಯಾರ್ಥಿನಿಯರು ಮಿಂಚಲು ಅವಕಾಶವಾಗಲಿದೆ. ಮಂಡ್ಯ ಜಿಲ್ಲೆಯಲ್ಲಿ ಬಾಲಕರ ವಸತಿ ನಿಲಯ ಇದೆ. ಆದರೆ, ಬಾಲಕಿಯರಿಗೆ ವಸತಿ ನಿಲಯ ಬೇಕು ಎನ್ನುವುದು ಬಹು ವರ್ಷಗಳ ಬೇಡಿಕೆಯಾಗಿತ್ತು.
ಸರ್ಕಾರದ ಮಂಜೂರಾತಿ ಆದೇಶದ ಪತ್ರ ಈಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಬಾಲಕಿಯರ ವಸತಿನಿಲಯ ಮಂಜೂರು ಮಾಡಿಸಿರುವುದು ಶ್ಲಾಘನೀಯ. ಕ್ರೀಡೆಯಲ್ಲಿ ಸಾಧನೆ ತೋರುವ ಕನಸು ಹೊತ್ತಿರುವ ಅದೆಷ್ಟೋ ಬಾಲಕಿಯರಿಗೆ ಇದು ವರದಾನವಾಗಲಿದೆ ಎಂದು ಮಂಡ್ಯ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಆರ್. ಅನಿತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶೀಘ್ರದಲ್ಲೆ ಶಂಕುಸ್ಥಾಪನೆ :ಬಾಲಕಿಯರ ಕ್ರೀಡಾ ವಸತಿನಿಲಯ ಕಟ್ಟಡಕ್ಕೆ ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು. ಅಲ್ಲದೆ 8 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ.
ಇದನ್ನೂ ಓದಿ:'ಸೂರ್ಯನ ಮೊಟ್ಟೆ'ಗೆ Z+ ಭದ್ರತೆ : ಮೂರೇ 3 ಮಾವಿನ ಹಣ್ಣಿನ ರಕ್ಷಣೆಗೆ ಶ್ವಾನ ಪಡೆ.. ತಿಂಗಳ ಖರ್ಚು ಎಷ್ಟು ಗೊತ್ತಾ..!