ನೆಲಮಂಗಲ: ಪ್ರಾಜಾಪ್ರಭುತ್ವದ ಈ ಹಬ್ಬದಲ್ಲಿ ಪ್ರತಿಯೊಬ್ಬರು ತಮ್ಮ ಹಕ್ಕನ್ನು ಚಲಾಯಿಸಬೇಕು. ಹೀಗಾಗಿ ಚುನಾವಣೆ ದಿನ ಘೋಷಣೆಯಾದಾಗಿನಿಂದ ಆಯೋಗದ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಯವರು ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಆದ್ರೆ ಪೂರ್ಣ ಪ್ರಮಾಣದ ಮತದಾನ ಮಾಡಲು ಜನ ಮುಂದಾಗುತ್ತಿಲ್ಲ.
ನಗರದ ವಿಕಲಚೇತನ ವ್ಯಕ್ತಿವೋರ್ವ ಎಲ್ಲರೂ ನಾಚಿಸುವಂತೆ ಬೆಳ್ಳಿರಥದಲ್ಲಿ ಮತ ಕೇಂದ್ರಕ್ಕೆ ಬಂದು ತಮ್ಮ ಹಕ್ಕು ಚಲಾಯಿಸಿ ಮಾದರಿ ಎನಿಸಿದ್ದಾರೆ.
ಮತದಾನ ಮಾಡಿದ ವಿಕಲಚೇತನ ವ್ಯಕ್ತಿ ನೆಲಮಂಗಲ ಪಟ್ಟಣದ ಚೆನ್ನಪ್ಪ ಬಡಾವಣೆ ನಿವಾಸಿ ಮಂಜುನಾಥ್ ಗೌಡ ವಿಶಿಷ್ಟವಾಗಿ ಬಂದು ಮತ ಹಾಕಿರುವ ವಿಕಲಚೇತನ. ಅವರು ತಮ್ಮ ಮನೆಯಿಂದ ಬೆಳ್ಳಿರಥದಲ್ಲಿ ಮತಗಟ್ಟೆಗೆ ಬರುವ ಮೂಲಕ ಗಮನ ಸೆಳೆದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ನೆಲಮಂಗಲ ಪಟ್ಟಣದ 190ನೇ ಮತಗಟ್ಟೆಯಲ್ಲಿ ಮಂಜುನಾಥ್ ಮತದಾನ ಮಾಡಿದರು. ಎಲ್ಲ ಸರಿಯಿದ್ದರು ಜನ ಮತಗಟ್ಟೆಯತ್ತ ಬರುವುದಿಲ್ಲ. ಆದರೆ ಮಂಜುನಾಥ್ ವಿಕಲಚೇತನರಾದರು ಪ್ರತಿಯೊಬ್ಬರು ಮಾತದಾನ ಮಾಡುವಂತೆ ಪ್ರೇರೇಪಿಸಲು ಬೆಳ್ಳಿ ರಥದಲ್ಲಿ ಬಂದು ಮತ ಹಾಕಿದ್ದಾಗಿ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮತದಾನ ಮಾಡಲು ಬರುತ್ತಿಲ್ಲ. ನಾನು ಎಲ್ಲರಿಗೂ ಮತ ಚಲಾಯಿಸಲು ಮನವಿ ಮಾಡುತ್ತಿದ್ದೇನೆ. ನಾನು ಇಂದು ಮತದಾನ ಮಾಡಿದ್ದು, ನೀವೂ ತಪ್ಪದೆ ಮತದಾನ ಮಾಡಿ ಎಂಬ ಸಂದೇಶವನ್ನು ಮಂಜುನಾಥ್ ಗೌಡ ಸಾರಿದರು.