ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದ ಎಲ್ಲ ಕ್ಷೇತ್ರಗಳಲ್ಲಿಯೂ ಗೆಲುವಿನ ನಗೆ ಬೀರಿದೆ. ಇದರೊಂದಿಗೆ ದೋಸ್ತಿ ಪಕ್ಷಗಳ ಪ್ರಾಬಲ್ಯವಿರುವ ದಕ್ಷಿಣ ಕರ್ನಾಟಕಕ್ಕೂ ಲಗ್ಗೆ ಇಟ್ಟಿದೆ.
ರಾಜ್ಯದಲ್ಲಿ ಎರಡನೇ ಹಂತದಲ್ಲಿ ನಡೆದ ಉತ್ತರ ಕರ್ನಾಟಕದ ಎಲ್ಲ 12 ಕ್ಷೇತ್ರಗಳಲ್ಲಿ ಬಿಜೆಪಿ ಸಂಪೂರ್ಣ ಜಯ ಗಳಿಸಿದೆ. ಕಳೆದ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಹನ್ನೆರಡು ಕ್ಷೇತ್ರಗಳಲ್ಲಿ ಬಿಜೆಪಿ 8 ಹಾಗೂ ಕಾಂಗ್ರೆಸ್ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದ್ರೆಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದೂ ಸೀಟನ್ನು ಬಿಡದೆ ಮಲ್ಲಿಕಾರ್ಜುನ ಖರ್ಗೆ ಅಂತಹ ಹಿರಿಯ ನಾಯಕರನ್ನು ಪರಾಭವಗೊಳಿಸಿ ಎಲ್ಲ ಕ್ಷೇತ್ರಗಳನ್ನು ಬಿಜೆಪಿ ತನ್ನ ತೆಕ್ಕೆಗೆ ತಗೆದುಕೊಂಡಿದೆ.
ಉತ್ತರ ಕರ್ನಾಟಕದ ಬಹುತೇಕ ಕ್ಷೇತ್ರಗಳು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆಯಾಗಿದ್ದವು. ಕೆಲವು ಕ್ಷೇತ್ರಗಳನ್ನು ಮಾತ್ರ ಕಾಂಗ್ರೆಸ್ ಗೆಲ್ಲುತ್ತಿತ್ತು. ಈ ಚುನಾವಣೆಯಲ್ಲಿ ಬಿಜೆಪಿಯು ಉತ್ತರ ಕರ್ನಾಟಕದ ಹಾವೇರಿ, ಧಾರವಾಡ, ಬಾಗಲಕೋಟೆ, ಬಿಜಾಪುರ, ಬೆಳಗಾವಿ, ಚಿಕ್ಕೋಡಿ, ಬೀದರ್, ಬಳ್ಳಾರಿ, ರಾಯಚೂರು, ಕೊಪ್ಪಳ, ಕಲಬುರಗಿ, ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳನ್ನು ಬಗ್ಗುಬಡಿದಿದೆ.
ಕರಾವಳಿ ಕ್ಷೇತ್ರಗಳಾದ ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು, ಉತ್ತರ ಕನ್ನಡ ಕ್ಷೇತ್ರ ಜಿಲ್ಲೆಗಳಲ್ಲಿ ಬಿಜೆಪಿ ಗೆದ್ದು ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ಇತ್ತ ಕಾಂಗ್ರೆಸ್-ಜೆಡಿಎಸ್ ಪ್ರಾಬಲ್ಯವಿರುವ ದಕ್ಷಿಣ ಕರ್ನಾಟಕದ ಮೈಸೂರು ಭಾಗದಲ್ಲೂ ಗೆಲುವಿನ ಅಲೆ ಎದ್ದಿದೆ. ಈವರೆಗೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಗೆ ಹೆಚ್ಚು ನೆಲೆ ಊರಲು ಸಾಧ್ಯವಾಗಿರಲಿಲ್ಲ. ಈ ಬಾರಿ ದಕ್ಷಿಣ ಕರ್ನಾಟಕಕ್ಕೂ ಲಗ್ಗೆ ಇಟ್ಟು ಕಾಂಗ್ರೆಸ್ ಭದ್ರಕೋಟೆಗಳನ್ನು ಬಿಜೆಪಿ ತನ್ನ ವಶಕ್ಕೆ ತೆಗೆದುಕೊಂಡಿದೆ.
ಕಾಂಗ್ರೆಸ್ ವಶದಲ್ಲಿದ್ದ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ತುಮಕೂರು ಕ್ಷೇತ್ರಗಳನ್ನು ಬಿಜೆಪಿ ಈ ಚುನಾವಣೆಯಲ್ಲಿ ಸೋಲಿಲ್ಲದ ಸರದಾರರಾದ ಕೆ.ಹೆಚ್ ಮುನಿಯಪ್ಪ, ಮಾಜಿ ಪ್ರಧಾನಿ ಜೆಡಿಎಸ್ ನ ದೇವೇಗೌಡರಂತಹ ದಿಗ್ಗರನ್ನು ಸೋಲಿಸಿ ದಕ್ಷಿಣ ಕರ್ನಾಟಕದಲ್ಲಿಯೂ ತನ್ನ ಸಾಮ್ರಾಜ್ಯ ವಿಸ್ತರಿಸಿಕೊಂಡಿದೆ.