ಬೆಂಗಳೂರು: "ಮೈಸೂರು ಲೋಕಸಭೆ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟು ತಮ್ಮನ್ನು ಶಾಶ್ವತವಾಗಿ ತವರು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದಿದ್ದೀರಾ ..? " ಎಂದು ಖಾರವಾಗಿ ಪಕ್ಷದ ಹೈಕಮಾಂಡ್ಗೆ ಹೇಳಿ ಮೈಸೂರು ಸೀಟನ್ನು ಹಸ್ತದ ತೆಕ್ಕೆಗೆ ಪಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅಗ್ನಿಪರೀಕ್ಷೆಗೆ ತಮ್ಮನ್ನು ಒಳಪಡಿಸಿಕೊಂಡಿದ್ದಾರೆ.
ದಕ್ಷಿಣ ಕರ್ನಾಟಕದ ಮೈಸೂರು ಲೋಕಸಭೆ ಕ್ಷೇತ್ರ ಸಿದ್ದರಾಮಯ್ಯನವರ ತವರು ಜಿಲ್ಲೆ. ಆದರೂ ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಸಿದ್ದರಾಮಯ್ಯ ನಡುವೆ ಸೀಟು ಹಂಚಿಕೆ ಸಂದರ್ಭದಲ್ಲಿ ರಾಜಕೀಯ ಪ್ರಹಸನವೇ ನಡೆದುಹೋಯಿತು.
ಕಾಂಗ್ರೆಸ್- ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ಸ್ವತಃ ಸಮಿತಿಯ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯನವರು ಮೈಸೂರನ್ನು ಬಿಟ್ಟುಕೊಡಲು ಒಪ್ಪದಿದ್ದಾಗ ಅದು ಹೈಕಮಾಂಡ್ ಅಂಗಳಕ್ಕೆ ಹೋಯಿತು. ಮಾಜಿ ಪ್ರಧಾನಿ ದೇವೇಗೌಡರು ಮೈಸೂರು ಕ್ಷೇತ್ರ ಜೆಡಿಎಸ್ಗೆ ಬೇಕೇಬೇಕೆಂದು ಪಟ್ಟುಹಿಡಿದರು. ಜೆಡಿಎಸ್ ಅಪೇಕ್ಷಿಸಿದ ಇತರ ಸೀಟುಗಳನ್ನು ನೀಡಿದ ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಮೈಸೂರು ವಿಚಾರದಲ್ಲಿ ಮಾತ್ರ ಸಿದ್ದರಾಮಯ್ಯ ಅವರ ಜತೆ ಮಾತನಾಡಿ ನಿರ್ಧಾರ ತಿಳಿಸುವುದಾಗಿ ಹೇಳಿದರು.
ಕಾಂಗ್ರೆಸ್ ಹೈಕಮಾಂಡ್ ಮೈಸೂರನ್ನು ಜೆಡಿಎಸ್ಗೆ ಬಿಟ್ಟಕೊಡಲು ಸಾಧ್ಯವೇ ಎಂದು ಕೇಳಿದಾಗ ಕೆರಳಿದ ಸಿದ್ದರಾಮಯ್ಯ " ಮೈಸೂರನ್ನು ಜೆಡಿಎಸ್ ಗೆ ನೀಡಿ ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತು ಬಾಗಲಕೋಟೆಯ ಬಾದಾಮಿಯಲ್ಲಿ ಗೆದ್ದಿರುವ ನನ್ನನ್ನು ಮೈಸೂರಿಂದ ಗಡಿಪಾರು ಮಾಡುವ ಯೋಚನೆ ಇದೆಯೇ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯನವರ ಅಸಮಾಧಾನದ ತೀವ್ರತೆ ಅರಿತ ಹೈಕಮಾಂಡ್ ಅಂತಿಮವಾಗಿ ಮೈಸೂರನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಜೆಡಿಎಸ್ಗೆ ತಿಳಿಸಿತು. ಇದರಿಂದ ಬೇಸರಗೊಂಡ ಮಾಜಿ ಪ್ರಧಾನಿ ದೇವೇಗೌಡರನ್ನು ಕಾಂಗ್ರೆಸ್ ಪಕ್ಷದ ಹಾಲಿ ಸಂಸದರಿರುವ " ತುಮಕೂರು " ಕ್ಷೇತ್ರ ನೀಡುವುದಾಗಿ ತಿಳಿಸಿ ಸಮಾಧಾನಪಡಿಸಿತು.
ಹೈಕಮಾಂಡ್ ಬಳಿ ಪಟ್ಟು ಹಿಡಿದು ಮೈಸೂರು ಕ್ಷೇತ್ರವನ್ನು ಪಡೆದಿರುವ ಸಿದ್ದರಾಮಯ್ಯನವರ ಮುಂದೆ ಈಗ ಹಲವಾರು ಸವಾಲುಗಳಿವೆ. ಮೈಸೂರು ಕ್ಷೇತ್ರದಲ್ಲಿ ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ಚುನಾವಣೆ ರಾಜಕೀಯ ಮಾಡಿ ಸಿದ್ದರಾಮಯ್ಯ ಮುಖಭಂಗ ಅನುಭವಿಸುವಂತೆ ಮಾಡಿತ್ತು. ಇದಕ್ಕೆ ಬಿಜೆಪಿಯ ಸಹಕಾರವೂ ಇತ್ತು...!