ಬೆಂಗಳೂರು: ಐಪಿಎಲ್ನ ಹನ್ನೆರಡನೇ ಆವೃತ್ತಿಯಲ್ಲಿ ಮತ್ತೊಂದು ಹ್ಯಾಟ್ರಿಕ್ ದಾಖಲಾಗಿದ್ದು, ಈ ಬಾರಿ ಸಾಧನೆಗೈದಿದ್ದು ಕನ್ನಡಿಗ ಅದೂ ತವರು ನೆಲದಲ್ಲಿ ಎನ್ನುವುದು ವಿಶೇಷ.
ಪ್ರಸ್ತುತ ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಆಡುತ್ತಿರುವ ಬೆಂಗಳೂರಿನ ಸ್ಪಿನ್ನರ್ ಶ್ರೇಯಸ್ ಗೋಪಾಲ್ ತವರು ತಂಡದ ಮೂವರು ಆಟಗಾರರನ್ನು ಸತತ ಎಸೆತದಲ್ಲಿ ಪೆವಿಯನ್ಗೆ ಕಳುಹಿಸಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಮಳೆಯಿಂದ ವಿಳಂಬವಾದ ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದವನ್ನು ಐದು ಓವರ್ಗೆ ಸೀಮಿತಗೊಳಿಸಲಾಗಿತ್ತು.
ಒಂದು ಓವರ್ ಎಸೆದ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಹನ್ನೆರಡು ನೀಡಿ ಸತತ ಮೂರು ವಿಕೆಟ್ ಕಬಳಿಸಿದರು. ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ ಹಾಗೂ ಮಾರ್ಕಸ್ ಸ್ಟೋಯ್ನಿಸ್ರ ವಿಕೆಟ್ ಪಡೆಯುವ ಮೂಲಕ ಐಪಿಎಲ್ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಕನ್ನಡಿಗ ಎನ್ನುವ ಹೆಗ್ಗಳಿಕೆಗೂ ಪಾತ್ರರಾದರು. ಯುವರಾಜ್ ಸಿಂಗ್ ಹಾಗೂ ಅಮಿತ್ ಮಿಶ್ರಾರ ಬಳಿಕ ಹ್ಯಾಟ್ರಿಕ್ ವಿಕೆಟ್ ಪಡೆದ ಮೂರನೇ ಭಾರತೀಯ ಶ್ರೇಯಸ್ ಗೋಪಾಲ್.
ಮಳೆಯಿಂದ ಅಡಚಣೆಗೊಳಗಾದ ಪಂದ್ಯದಲ್ಲಿ ಆರ್ಸಿಬಿ ಐದು ಓವರ್ನಲ್ಲಿ 62 ರನ್ ಗಳಿಸಿತ್ತು. ನಂತರ ಗುರಿ ಬೆನ್ನತ್ತಿದ ಆರ್ಆರ್ 41 ರನ್ ಗಳಿಸಿದ್ದಾಗ ಮತ್ತೆ ಮಳೆ ಆರಂಭವಾಯಿತು. ಪರಿಣಾಮ ಪಂದ್ಯವನ್ನು ಸ್ಥಗಿತಗೊಳಿಸಿ ಎರಡು ತಂಡಕ್ಕೂ ತಲಾ ಒಂದೊಂದು ಅಂಕವನ್ನು ನೀಡಲಾಯಿತು.