ಯಾದಗಿರಿ:ರಾಜ್ಯದ 14 ಕ್ಷೇತ್ರದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ಇಂದು ನಡೆಯಲಿದ್ದು,ಈ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ಮತಗಟ್ಟೆ ಕೇಂದ್ರಗಳು ಮಧುವಣಗಿತ್ತಿಯಂತೆ ಸಿಂಗಾರಗೊಂಡಿವೆ.
ಯಾದಗಿರಿ ಜಿಲ್ಲೆಯಲ್ಲಿ ಶಹಾಪುರ,ಸುರಪುರ, ಯಾದಗಿರಿ ವಿಧಾನಸಭಾ ಕ್ಷೇತ್ರಗಳು ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತವೆ. ಯಾದಗಿರಿ ಜಿಲ್ಲೆಯ ಗುರುಮಿಠಕಲ್ ವಿಧಾನಸಭಾ ಕ್ಷೇತ್ರವು ಕಲಬರಗಿ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತದೆ.
ಲೋಕಸಭಾ ಚುನಾವಣೆ ಸಂಪೂರ್ಣ ತಯಾರಿ ಯಾದಗಿರಿ ಜಿಲ್ಲೆಯಲ್ಲಿ 9,88,392 ಮತದಾರರಿದ್ದು, ಅದರಲ್ಲಿ ಪುರುಷ ಮತದಾರರು 4,93,943 ಹಾಗೂ 4,94,352 ಮಹಿಳಾ ಮತದಾರರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ1135 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟೆ ಕೇಂದ್ರಕ್ಕೆ 4 ಸಿಬ್ಬಂದಿಗಳು, ಪಿಆರ್ಒ ,ಎಪಿಆರ್ಒ, ಪಿಓ ಗಳನ್ನು ನೇಮಕ ಮಾಡಲಾಗಿದ್ದು ಒಟ್ಟು 4540 ಮತಗಟ್ಟೆ ಅಧಿಕಾರಿಗಳನ್ನು ಲೋಕಸಭಾ ಚುನಾವಣೆಗೆ ಬಳಸಿಕೊಳ್ಳಲಾಗಿದೆ .
ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2 ಸಖಿ ಕೇಂದ್ರಗಳಂತೆ ನಾಲ್ಕು ವಿಧಾನಸಭಾ ಕ್ಷೇತ್ರಕ್ಕೆ 8 ಸಖಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ 232 ಸೂಕ್ಷ್ಮ ಮತದಾನ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಈಟಿವಿ ಭಾರತ್ಗೆ ತಿಳಿಸಿದ್ದಾರೆ.