ಚಾಮರಾಜನಗರ: ರಜೆಯ ಮಜಾ ಅನುಭವಿಸಿದ್ದ ಮಕ್ಕಳು ಇಂದಿನಿಂದ ಮತ್ತೆ ಶಾಲೆಯತ್ತ ಹೆಜ್ಜೆ ಹಾಕಿದ್ದಾರೆ. ಈ ಶಾಲೆಯಲ್ಲಿ ಮಕ್ಕಳು ಬಣ್ಣ-ಬಣ್ಣದ ವೇಷ ತೊಟ್ಟು ಸಂಭ್ರಮದಿಂದ ಶಾಲೆಯತ್ತ ಮುಖಮಾಡಿದ್ದಾರೆ.
ಶೈಕ್ಷಣಿಕ ವರ್ಷದ ಪ್ರಾರಂಭವನ್ನು ಪ್ರತಿ ಬಾರಿಯೂ ಹಬ್ಬದಂತೆ ಆಚರಿಸಿ ಮಕ್ಕಳನ್ನು ವಿಶೇಷವಾಗಿ ಬರಮಾಡಿಕೊಳ್ಳುವ ಚೆನ್ನಿಪುರದ ಸರ್ಕಾರಿ ಶಾಲೆಯಲ್ಲಿ ಇಂದು ಹಬ್ಬದ ವಾತಾವರಣ ಕಳೆಗಟ್ಟಿತ್ತು. 1ನೇ ತರಗತಿಗೆ ದಾಖಲಾದ ಮಕ್ಕಳು ವಿಶೇಷವಾಗಿ ಸಿಂಗಾರಗೊಂಡು ಹಿರಿಯ ಸಹಪಾಠಿಗಳೊಂದಿಗೆ ಮೆರವಣಿಗೆ ಮೂಲಕ ಶಾಲೆಗೆ ಆಗಮಿಸಿದರು. ಮಕ್ಕಳ ಮೆರವಣಿಗೆಗೆ ಗೊರವರ ಕುಣಿತದ ಕಲಾವಿದರು ಮೆರಗು ತುಂಬಿದರು.
ಇನ್ನು, ಶಾಲೆಯ ಪ್ರವೇಶದ್ವಾರದಲ್ಲಿ ಶಿಕ್ಷಕಿಯರು ಮಕ್ಕಳಿಗೆ ಆರತಿ ಎತ್ತಿ, ಸಿಹಿ ತಿಂಡಿ ನೀಡಿ ಬರಮಾಡಿಕೊಂಡರು. ಹೊಸದಾಗಿ ದಾಖಲಾದ ಮಕ್ಕಳು ಶಾಲೆಯ ಆವರಣದಲ್ಲಿ ಗಿಡ ನೆಟ್ಟು ಮಾದರಿ ಸಂಸ್ಕೃತಿಗೆ ನೀರೆರೆದರು.