ಕರ್ನಾಟಕ

karnataka

ETV Bharat / briefs

ಶಾಪ ಕೊಟ್ಟ ತಿಂಗಳಲ್ಲೇ ಕರ್ಕರೆ ಹತ್ಯೆ... ಮುಂಬೈ ದಾಳಿಯಲ್ಲಿ ಮಡಿದ ವೀರ ಕಲಿಯನ್ನು ಹೀಯಾಳಿಸಿದ ಸಾಧ್ವಿ

ಮುಂಬೈ ದಾಳಿಯ ವೇಳೆ ವೀರಮರಣವನ್ನಪ್ಪಿದ ಹೇಮಂತ್​ ಕರ್ಕರೆ ಬಗ್ಗೆ ಬಿಜೆಪಿ ಭೋಪಾಲ್​​ ಕ್ಷೇತ್ರದ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್​​ ಠಾಕೂರ್​ ಹೇಳಿಕೆ ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದು ಎಲ್ಲ ರಾಜಕೀಯ ಪಕ್ಷಗಳೂ ಹೇಳಿಕೆಯನ್ನು ಕಟುವಾಗಿ ಟೀಕಿಸಿವೆ.

ಸಾಧ್ವಿ

By

Published : Apr 19, 2019, 7:13 PM IST

ನವದೆಹಲಿ: ಮುಂಬೈ ದಾಳಿಯ ವೇಳೆ ವೀರಮರಣವನ್ನಪ್ಪಿದ ಹೇಮಂತ್​ ಕರ್ಕರೆ ಬಗ್ಗೆ ಬಿಜೆಪಿ ಭೋಪಾಲ್​​ ಕ್ಷೇತ್ರದ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್​​ ಠಾಕೂರ್​ ಹೇಳಿಕೆ ಸಾಕಷ್ಟು ವಿವಾದಕ್ಕೆ ಗುರಿಯಾಗಿದೆ.

ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹೇಮಂತ್​​ ಕರ್ಕರೆ ಸಾಯಲು ನಾನು ಶಾಪ ನೀಡಿದ್ದಾಗಿ ಮಾಧ್ಯಮಗೋಷ್ಠಿಯಲ್ಲಿ ಸಾಧ್ವಿ ಪ್ರಗ್ಯಾ ಸಿಂಗ್​​ ಹೇಳಿಕೆ ನೀಡಿದ್ದಳು.

ಮಾಲೇಗಾಂವ್​ ಸ್ಫೋಟಕ್ಕೆ ಸಂಬಂಧಿಸಿದಂತೆ ನನ್ನನ್ನು ಬಿಡುಗಡೆಗೊಳಿಸದಂತೆ ಕರ್ಕರೆ ನಿರ್ಧರಿಸಿದ್ದರು. ಮುಂಬೈ ಜೈಲಿನಲ್ಲಿ ನಾನಿದ್ದ ವೇಳೆ, ತನಿಖಾ ದಳವನ್ನು ಮುಂಬೈಗೆ ಕರೆಸಿದ್ದರು. ನನ್ನ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲವಾದಲ್ಲಿ ಜೈಲಿನಲ್ಲಿ ಇರಿಸಲು ಸಾಧ್ಯವಿಲ್ಲ ಎಂದು ತನಿಖಾ ದಳ ಕರ್ಕರೆಗೆ ಹೇಳಿತ್ತು.

ಸಾಕ್ಷ್ಯಕ್ಕಾಗಿ ನಾನು ಏನು ಬೇಕಾದರೂ ಮಾಡಬಲ್ಲೆ, ಸಾಧ್ಯವಾಗದೇ ಇದ್ದಲ್ಲಿ ಸಾಕ್ಷ್ಯವನ್ನು ಹುಟ್ಟುಹಾಕುತ್ತೇನೆ. ಆದರೆ ಸಾಧ್ವಿಯನ್ನು ಬಿಡುಗಡೆಗೊಳಿಸುವುದಿಲ್ಲ ಎಂದು ಕರ್ಕರೆ ಹೇಳಿದ್ದರು ಎಂದು ಸಾಧ್ವಿ ಹೇಳಿದ್ದಾರೆ.

ನನಗೆ ಕರ್ಕರೆ ಸಾಕಷ್ಟು ಹಿಂಸೆ ನೀಡಿದ್ದಾರೆ. ನಿರ್ದಯವಾಗಿ ನನ್ನನ್ನು ಕರ್ಕರೆ ಜೈಲಿನಲ್ಲಿ ಹಿಂಸೆ ನೀಡಿದ್ದರು. ಈ ವೇಳೆ ನೀವು ನಾಶವಾಗಿ ಹೋಗುತ್ತೀರಾ ಎಂದು ಹೇಳಿದ್ದೆ. ಇದಾದ ಒಂದು ತಿಂಗಳಲ್ಲೇ ಕರ್ಕರೆ ಉಗ್ರರ ಗುಂಡೇಟಿಗೆ ಬಲಿಯಾದರು ಎಂದು ಸಾಧ್ವಿ ಮಾಧ್ಯಮಗೋಷ್ಠಿ ಹೇಳಿದ್ದಾರೆ.

ಭುಗಿಲೆದ್ದ ಆಕ್ರೋಶ:

ಭೋಪಾಲ್​ ಕ್ಷೇತ್ರದಲ್ಲಿ ಸಾಧ್ವಿ ಪ್ರತಿಸ್ಪರ್ಧಿಯಾಗಿರುವ ಕಾಂಗ್ರೆಸ್​​ನ ಹಿರಿಯ ನಾಯಕ ದಿಗ್ವಿಜಯ್​ ಸಿಂಗ್​, ಸಾಧ್ವಿ ಪ್ರಗ್ಯಾ ಸಿಂಗ್​​ ಠಾಕೂರ್ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದಾರೆ.

ಹೇಮಂತ್​ ಕರ್ಕರೆ ಓರ್ವ ನಿಷ್ಠಾವಂತ ಅಧಿಕಾರಿಯಾಗಿದ್ದರು. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಇದಕ್ಕಾಗಿ ನಾವು ಕರ್ಕರೆಯನ್ನು ಗೌರವಿಸಬೇಕು. ಇಂತಹ ಕೀಳುಮಟ್ಟದಲ್ಲಿ ಮಾತನಾಡಬಾರದು ಎಂದು ದಿಗ್ವಜಯ್​ ಸಿಂಗ್ ಆಕ್ರೋಶ ಹೊರಹಾಕಿದ್ದಾರೆ.

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​​ ಸಹ ಸಾಧ್ವಿ ಹೇಳಿಕೆಯನ್ನು ವಿರೋಧಿಸಿದ್ದಾರೆ. ಹೇಳಿಕೆ ನಾಚಿಕೆಗೇಡು ಎಂದು ಕೇಜ್ರಿವಾಲ್​ ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮೂಲಕ ಸಾಧ್ವಿ ಪ್ರಗ್ಯಾ ಸಿಂಗ್​ ಠಾಕೂರ್​ ಮಾತುಗಳನ್ನು ಖಂಡಿಸಿದ್ದು, ವೀರ ಬಲಿದಾನ ಮಾಡಿದವರನ್ನು ಗೌರಯುತವಾಗಿ ಕಾಣಬೇಕು ಎಂದಿದ್ದಾರೆ.

ಐಪಿಎಸ್​ ಆಫೀಸರ್ಸ್ ಅಸೋಸಿಯೇಷನ್​​​ ಸಹ ಸಾಧ್ವಿ ಪ್ರಗ್ಯಾ ಸಿಂಗ್​​ ಠಾಕೂರ್ ಮಾತನ್ನು ಖಂಡಿಸಿದೆ. ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟ ಅಶೋಕ ಚಕ್ರ ವಿಜೇತ ಓರ್ವ ಹೆಮ್ಮೆಯ ಅಧಿಕಾರಿಯನ್ನು ಗೌರವಿಸಬೇಕು ಎಂದು ಅಸೋಸಿಷೇಯನ್​​ ಪದಾಧಿಕಾರಿಗಳು ಹೇಳಿದ್ದಾರೆ.

ಬಿಜೆಪಿ ಪ್ರತಿಕ್ರಿಯೆ:

ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್​ ವಿವಾದಿತ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಪ್ರತಿಕ್ರಿಯಿಸಿದ್ದು, ಆಕೆಯ ಹೇಳಿಕೆ ವೈಯಕ್ತಿಕವಾಗಿದ್ದು, ಬಹುಶಃ ಜೈಲಿನಲ್ಲಿ ಆಕೆಗೆ ನೀಡಲಾದ ಚಿತ್ರಹಿಂಸೆ ಬಗ್ಗೆ ನೋವಿನಿಂದ ಮಾತನಾಡಿರಬಹುದು ಎಂದು ಹೇಳಿದೆ.

ಈ ಮೊದಲು ಬಿಜೆಪಿ ನಾಯಕ ಶಹನವಾಜ್​​​ ಹುಸೇನ್​​ ಸಾಧ್ವಿ ಹೇಳಿಕೆಯನ್ನು ಖಂಡಿಸಿದ್ದರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರ ಬಗ್ಗೆ ಇಂತಹ ಹೇಳಿಕೆ ಸಲ್ಲದು ಮತ್ತು ಅವರ ಪ್ರಾಣತ್ಯಾಗದ ಬಗ್ಗೆ ಪ್ರಶ್ನೆ ಮಾಡಬಾರದು ಎಂದಿದ್ದರು.

ABOUT THE AUTHOR

...view details