ಶಿವಮೊಗ್ಗ:ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹೊರ ಗುತ್ತಿಗೆ ಸಿಬ್ಬಂದಿ ಕೋವಿಡ್ಗೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ಅಂತವರ ಚಿಕಿತ್ಸಾ ವೆಚ್ಚವನ್ನ ಗ್ರಾಮೀಣಾಭಿವೃದ್ದಿ ಇಲಾಖೆ ಭರಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಇಲ್ಲಿನ ಜಿಲ್ಲಾ ಪಂಚಾಯತ್ನ ಸಿಇಓ ಕಚೇರಿಯಲ್ಲಿ ಕಲಬುರಗಿ ಮತ್ತು ಬೆಳಗಾವಿ ವಿಭಾಗದ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಮಾತನಾಡಿದ ಅವರು, ಕೋವಿಡ್ಗೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರಿಗೆ ಇಲಾಖೆಯಿಂದ ಸಹಾಯ ಮಾಡಲಾಗುತ್ತದೆ. ಜನರಲ್ ವಾರ್ಡ್ಗೆ 10 ಸಾವಿರ, ಹೆಚ್ಡಿಯು ವಾರ್ಡ್ಗೆ 12 ಸಾವಿರ, ವೆಂಟಲೇಟರ್ ಇಲ್ಲದ ಐಸಿಯು ವಾರ್ಡ್ಗೆ 15 ಸಾವಿರ ಹಾಗೂ ವೆಂಟಿಲೇಟರ್ ಇರುವ ಐಸೋಲೇಷನ್ ಐಸಿಯು ವಾರ್ಡ್ಗೆ 25 ಸಾವಿರ ರೂ. ಪಾವತಿ ಮಾಡಲಾಗುವುದು ಎಂದರು.
ಈಗ ಕೋವಿಡ್ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಬೇಕಾದ ಹಣವನ್ನು 15ನೇ ಹಣಕಾಸು ಯೋಜನೆಯಡಿ ಪಡೆಯಬಹುದಾಗಿದೆ. 15ನೇ ಹಣಕಾಸು ಯೋಜನೆಯನ್ನು ಗ್ರಾಮ ಪಂಚಾಯತ್ನವರೇ ತಯಾರು ಮಾಡಿಕೊಳ್ಳಬೇಕಿದೆ. ಇದರಲ್ಲಿ ಕುಡಿಯುವ ನೀರು ಹಾಗೂ ನೈರ್ಮಲ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕಿದೆ. ಈ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಓ ಅನುಮತಿ ಪಡೆಯಬೇಕಿಲ್ಲ ಎಂದರು.