ನವದೆಹಲಿ: ಡೆಲ್ಲಿ ವಿರುದ್ಧ ನಡೆದ ಪಂದ್ಯದಲ್ಲಿ ಒಂದು ಕಡೆ ವಿಕೆಟ್ ಬೀಳುತ್ತಿದ್ದರು ಮತ್ತೊಂದು ಕಡೆ ಏಕಾಂಗಿಯಾಗಿ ಬ್ಯಾಟಿಂಗ್ ನಡೆಸಿ ತಂಡದ ಮೊತ್ತ 100ರ ಗಡಿ ದಾಟುವಂತೆ ಮಾಡಿದ ರಿಯಾನ್ ಪರಾಗ್ ಐಪಿಎಲ್ನಲ್ಲಿ ಅರ್ಧಶತಕ ಸಿಡಿಸಿದ ಕಿರಿಯ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಪ್ಲೇ ಆಫ್ ತಲುಪಲು ಇದ್ದ ಕೊನೆಯ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿದ ರಾಜಸ್ಥಾನ ರಾಯಲ್ಸ್ ತಂಡ ಕೇವಲ 6 ಓವರ್ ಮುಗಿಯುವ ವೇಳೆಗೆ ತಂಡದ ಪ್ರಮುಖ ಬ್ಯಾಟ್ಸ್ಮನ್ಗಳಾದ ರಹಾನೆ, ಸಂಜು ಸಾಮ್ಸನ್, ಲೆವಿಂಗ್ಸ್ಟೋನ್ ಹಾಗೂ ಲಾಮ್ರೋರ್ ವಿಕೆಟ್ ಕಳೆದುಕೊಂಡು ಕಡಿಮೆ ಮೊತ್ತಕ್ಕೆ ಆಲೌಟ್ ಆಗುವ ಭೀತಿಗೆ ಒಳಾಗಾಗಿತ್ತು.
ಆದರೆ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ಪರಾಗ್ ತಮ್ಮ 20 ಓವರ್ಗಳವರಗೆ ಕ್ರೀಸ್ನಲ್ಲಿ ನೆಲೆಯೂರಿ 49 ಎಸೆತಗಳನ್ನೆದುರಿಸಿ 50 ರನ್ ಕಲೆ ಹಾಕಿದರು. ಇವರ ಇನ್ನಿಂಗ್ಸ್ನಲ್ಲಿ 2 ಸಿಕ್ಸರ್ ಹಾಗೂ 4 ಬೌಂಡರಿ ಒಳಗೊಂಡಿದ್ದವು. ಈ ಅರ್ಧಶತಕದ ಮೂಲಕ ಪರಾಗ್ ಐಪಿಎಲ್ನಲ್ಲಿ ಅರ್ಧಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟ್ಸ್ಮನ್ ಎಂಬ ದಾಖಲೆ ಬರೆದರು.
ಪರಾಗ್ 17 ವರ್ಷ 175 ದಿನಗಳಲ್ಲಿ ಅರ್ಧಶತಕ ಗಳಿಸಿ ಸಾಧನೆ ಮಾಡಿದ್ದಾರೆ. ಇವರಿಗಿಂತ ಮೊದಲು ಸಂಜು ಸಾಮ್ಸನ್ 2013ರಲ್ಲಿ ಈ ಸಾಧನೆ ಮಾಡಿದ್ದರು. ಸಂಜು ಸಾಮ್ಸನ್ 18 ವರ್ಷ 169 ದಿನಗಳಿಗೆ ಈ ಸಾಧನೆ ಮಾಡಿದ್ದರು.
ಇವರಿಬ್ಬರನ್ನು ಹೊರೆತುಪಡಿಸಿದರೆ ಡೆಲ್ಲಿ ತಂಡದ ಪೃಥ್ವಿ ಶಾ 18 ವರ್ಷ 169 ದಿನಗಳಲ್ಲಿ, ರಿಷಭ್ ಪಂತ್ 18 ವರ್ಷ 212 ದಿನಗಳಲ್ಲಿ, ಶುಬ್ಮನ್ ಗಿಲ್ 18 ವರ್ಷ 237 ದಿನಗಳಲ್ಲಿ ಐಪಿಎಲ್ನಲ್ಲಿ ಅರ್ಧಶತಕ ಸಿಡಿಸಿದ ಕಿರಿಯರ ಲಿಸ್ಟ್ನಲ್ಲಿದ್ದಾರೆ.