ಹುಬ್ಬಳ್ಳಿ :ಕೊರೊನಾ ವಿರುದ್ಧ ಹೋರಾಡುತ್ತಿರುವ ವಾರಿಯರ್‌ಗಳನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ಗೌರವಿಸಿದೆ. ಈ ಕಾರ್ಯಕ್ಕೆ ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ನವಲಗುಂದ ಪಟ್ಟಣ ಪಂಚಾಯತ್ ಕಾರ್ಯಾಲಯದ ಆವರಣದಲ್ಲಿ ಕೊರೊನಾ ವಾರಿಯರ್ಸ್‌ಗೆ ಆಹಾರ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ ಮುನೇನಕೊಪ್ಪ ಅವರು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಹಾಗೂ ಪಟ್ಟಣ ಪಂಚಾಯತ್ ಪುರಸಭೆಗಳ ಸಿಬ್ಬಂದಿಗೆ ಕ್ಷಮತಾ ಪರ ಆಹಾರ ಕಿಟ್‍ಗಳನ್ನು ವಿತರಿಸಿದರು.
ಬಳಿಕ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ ವೈರಸ್ ರೌದ್ರನರ್ತನ ಮುಂದುವರೆಸಿದೆ. ವೈರಸ್ ನಿಯಂತ್ರಣದ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದಿಟ್ಟ ಹೋರಾಟ ಮಾಡುತ್ತಿರುವ ಕೊರೊನಾ ವಾರಿಯರ್ಸ್‍ಗಳ ಸೇವೆ ಸ್ಮರಣೀಯವಾಗಿದೆ. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಯ ಸೇವೆಯನ್ನು ಗುರುತಿಸಿ ಅವರುಗಳನ್ನು ಗೌರವಿಸುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಕೊರೊನಾ ವಾರಿಯರ್ಸ್‍ಗಳಾಗಿ ಕಾರ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಈ ಕಾರ್ಯ ದೇವರ ಕೆಲಸವಿದ್ದಂತೆ ಎಂದರು. ಕಾರ್ಯಕ್ರಮವನ್ನು ಇಡೀ ಧಾರವಾಡ ಲೋಕಸಭಾ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ಪಟ್ಟಣ ಪಂಚಾಯತ್, ಪುರಸಭೆ ಸಿಬ್ಬಂದಿಗೆ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.