ಬೆಂಗಳೂರು: ವೀಕೆಂಡ್ ಕರ್ಫ್ಯೂ ಪರಿಣಾಮ ವಧು-ವರರನ್ನು ಆಶೀರ್ವದಿಸಲು ಬಂಧು-ಮಿತ್ರರು ಇಲ್ಲದೆ ಕಲ್ಯಾಣ ಮಂಟಪಗಳು ಬಣಗುಡುತ್ತಿವೆ.
ಅಗತ್ಯ ವಸ್ತು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳ ಬಂದ್ ಸೇರಿದಂತೆ ಹಲವಾರು ಕ್ರಮ ಕೈಗೊಂಡಿರುವ ಸರ್ಕಾರ ಮದುವೆಯಲ್ಲಿ ಭಾಗವಹಿಸುವವರ ಸಂಖ್ಯೆಯನ್ನು 50 ಜನಕ್ಕೆ ಮಿತಿಗೊಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಆದರೆ, ಈ ಮಾರ್ಗಸೂಚಿ ಹೊರಡಿಸುವುದಕ್ಕೂ ಮೊದಲೇ ನೂರಾರು ಮದುವೆಗಳು ನಿಗದಿಯಾಗಿವೆ. ಆದರೆ, ಲಾಕ್ಡೌನ್ ಮೊದಲಿಗೆ ನಿಗದಿಯಾಗಿದ್ದ ವಿವಾಹ ಸಂಭ್ರಮಗಳಿಗೆ ಈಗ ಸಂಕಷ್ಟ ಎದುರಾಗಿದೆ.
ಸಾವಿರಾರು ಸ್ನೇಹಿತರ, ಬಂಧುಗಳ ಸಮ್ಮುಖದಲ್ಲಿ ನಡೆಯಬೇಕಾಗಿದ್ದ ಮದುವೆ ಸಮಾರಂಭ ಕೇವಲ ಬೆರಳೆಣಿಕೆಯ ಎರಡು ಕುಟುಂಬಸ್ಥರ ನಡುವೆ ನಡೆಯುತ್ತಿದ್ದು, ನವ ವಧು-ವರರನ್ನು ಆಶೀರ್ವಾದ ಮಾಡಲು ಯಾರು ಇಲ್ಲದೆ ಕುರ್ಚಿಗಳು ಖಾಲಿ ಖಾಲಿಯಾಗಿವೆ.
ಬೆಂಗಳೂರು ಹೊರ ವಲಯದ ಮಹದೇವಪುರ ಗ್ರಾಮಾಂತರ ಪ್ರದೇಶದ ಕಾಟಂ ನಲ್ಲೂರಿನ ಶುಭ ಸಪ್ತಗಿರಿ ಕಲ್ಯಾಣ ಮಂಟಪ, ಕೆಎಂಎಂ ಕಲ್ಯಾಣ ಮಂಟಪ ಹಾಗೂ ಸಮೃದ್ಧಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಮದುವೆ ಆರತಕ್ಷತೆಗೆ ಬೆರಳೆಣಿಕೆಯಷ್ಟು ಜನ ಮಾತ್ರ ಇದ್ದರು.
ಐವತ್ತಕ್ಕೂ ಹೆಚ್ಚು ಕುರ್ಚಿಗಳನ್ನ ಹಾಕಿದ್ದರೂ ಕುರ್ಚಿಯಲ್ಲಿ ಯಾರೊಬ್ಬರು ಕಾಣಸಿಗಲಿಲ್ಲ. ಒಂದೆಡೆ ಹಾರೈಕೆ ಮಾಡಲು ಜನರು ಮುಂದಾದರೂ ಕೂಡ ಕೊರೊನಾ ನಿಯಮ ಎಲ್ಲರನ್ನೂ ಕಟ್ಟಿಹಾಕಿದೆ. ಇದು ಅನಿವಾರ್ಯ ಕೂಡ.