ದಾವಣಗೆರೆ: ಹಣಕ್ಕೆ ಹೆಣವೇ ಬಾಯಿ ಬಿಡುತ್ತೆ ಎನ್ನುವ ಕಾಲವಿದು. ರಸ್ತೆಯಲ್ಲಿ ಕಳೆದುಕೊಂಡ ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಚಿನ್ನ ಹಾಗೂ ನಗದು ಕಳೆದುಕೊಂಡವರ ಕೈ ಸೇರಿದೆ ಎಂದರೆ ನಿಜಕ್ಕೂ ಅವರು ಅದೃಷ್ಟವಂತರೇ. ಅಷ್ಟಕ್ಕೂ ಈ ಪ್ರಾಮಾಣಿಕತೆ ಮೆಚ್ಚುವ ಕಾರ್ಯ ನಡೆದದ್ದು ದಾವಣಗೆರೆ ನಗರದಲ್ಲಿ.
ದಾವಣಗೆರೆಯ ವಿದ್ಯಾನಗರ ನಿವಾಸಿಗಳು ಕಳೆದುಕೊಂಡಿದ್ದ ಚಿನ್ನ, ಹಣವನ್ನು ಯುವಕರು ಪೊಲೀಸ್ ಠಾಣೆಗೆ ತಂದುಕೊಟ್ಟಿದ್ದಾರೆ ನಗರದ ವಿದ್ಯಾನಗರ ರಸ್ತೆಯಲ್ಲಿ ಆಂಧ್ರ ಪ್ರದೇಶ ಮೂಲದ ಅನಂತಪುರ ಜಿಲ್ಲೆಯ ನಿವಾಸಿಗಳಾದ ಶ್ರೀನಾಥ ಹಾಗೂ ಅಂಜನಾ ಎಂಬ ದಂಪತಿ ಆಟೋದಲ್ಲಿ ತೆರಳುವಾಗ ಬ್ಯಾಗ್ ಬೀಳಿಸಿಕೊಂಡು ಹೋಗಿದ್ದಾರೆ. ಮನೆ ತಲುಪಿದ ಬಳಿಕ ಬ್ಯಾಗ್ ಇಲ್ಲದ್ದು ಗಮನಕ್ಕೆ ಬಂದಿದೆ. ತಕ್ಷಣವೇ ಬಸ್ ನಿಲ್ದಾಣ ಸೇರಿದಂತೆ ರಸ್ತೆಯಲ್ಲಿ ಹುಡುಕಿದ್ದಾರೆ. ಬ್ಯಾಗ್ನಲ್ಲಿ 1.30 ಲಕ್ಷ ಮೌಲ್ಯದ ಚಿನ್ನ ಹಾಗೂ 2 ಸಾವಿರ ನಗದು ಇತ್ತು. ಎಲ್ಲೂ ಸಿಗದ ಕಾರಣ ಹತ್ತಿರದ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾರೆ. ಠಾಣೆಯಲ್ಲಿ ತಾವು ಕಳೆದುಕೊಂಡ ಬ್ಯಾಗ್ ನೋಡಿ ನಿಟ್ಟುಸಿರು ಬಿಟ್ಟಿದ್ದಾರೆ.
ದಾವಣಗೆರೆ ವಿದ್ಯಾನಗರದ ರಸ್ತೆಯಲ್ಲಿ ರಾಘವೇಂದ್ರ, ರಾಜೇಶ್ ಮತ್ತು ಪರುಶುರಾಮ್ ನಡೆದುಕೊಂಡು ಹೋಗುತ್ತಿದ್ದಾಗ ರಸ್ತೆ ಪಕ್ಕದಲ್ಲಿ ಕಪ್ಪು ಬಣ್ಣದ ಬ್ಯಾಗ್ ಬಿದ್ದಿದ್ದು ಗಮನಿಸಿದ್ದಾರೆ. ಯಾರೋ ಬೀಳಿಸಿಕೊಂಡು ಹೋಗಿರಬೇಕು, ಮರಳಿ ಬಂದರೆ ಕೊಟ್ಟರಾಯಿತು ಎಂದು ಸ್ವಲ್ಪ ಸಮಯ ಅಲ್ಲೇ ನಿಂತಿದ್ದಾರೆ. ಆದರೆ, ಯಾರೂ ಬಂದಿಲ್ಲ. ಬಳಿಕ ಬ್ಯಾಗ್ನ್ನು ವಿದ್ಯಾನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಯುವಕರು ಬ್ಯಾಗ್ ಠಾಣೆಗೆ ನೀಡಿರುವುದನ್ನು ಕೇಳಿದ ದಂಪತಿ ಕಣ್ತುಂಬಿಕೊಂಡಿದ್ದಾರೆ. ನಂತರ ಪೊಲೀಸರು ಯುವಕರ ಕೈಯಿಂದಲೇ ದಂಪತಿಗೆ ಬ್ಯಾಗ್ ಹಿಂದಿರುಗಿಸಿದ್ದಾರೆ. ಯುವಕರ ಪ್ರಾಮಾಣಿಕತೆಗೆ ದಂಪತಿ ಧನ್ಯವಾದ ತಿಳಿಸಿದ್ದಾರೆ. ಇವರ ಪ್ರಾಮಾಣಿಕತೆ, ಮಾನವೀಯತೆಗೆ ವಿದ್ಯಾನಗರ ಪೊಲೀಸರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕಷ್ಟಪಟ್ಟು ದುಡಿದ ಹಣದಿಂದ ಖರೀದಿಸಿದ್ದ ಬಂಗಾರದ ಸರ ಮತ್ತೆ ಮರಳಿ ಸಿಕ್ಕಿದ್ದು ದಂಪತಿಗೂ ಸಂತಸ ತಂದಿದೆ. ಪ್ರಾಮಾಣಿಕತೆಯೇ ಮಾಯವಾಗುತ್ತಿರುವ ಈ ಕಾಲದಲ್ಲಿ ವಿದ್ಯಾನಗರದ ಯುವಕರ ನಡೆ ಮಾದರಿಯಾಗಿದೆ.