ಕರ್ನಾಟಕ

karnataka

ETV Bharat / briefs

ಎಂಎಸ್‌ಎಂಇಗಳನ್ನು ಸಂಕಷ್ಟದಿಂದ‌‌ ಪಾರು ಮಾಡಿ: ಕಾಸಿಯಾ ಅಧ್ಯಕ್ಷರಿಂದ ಸರ್ಕಾರಕ್ಕೆ ಮನವಿ - MSMEs news

ನಿರಂತರವಾಗಿ ಏರುತ್ತಿರುವ ಉಕ್ಕು, ಪ್ಲಾಸ್ಟಿಕ್ ಮತ್ತು ಕೈಗಾರಿಕಾ ಕಚ್ಚಾ ಸಾಮಗ್ರಿಗಳ ಬೆಲೆಯನ್ನು ನಿಯಂತ್ರಿಸಿ, ಸೂಕ್ತ ಬೆಲೆ ನಿಗದಿಪಡಿಸಿ ಮತ್ತು ಆಮ್ಲಜನಕ ಸಿಲಿಂಡರ್‌ಗಳನ್ನು ಬಳಸುವ ಕೈಗಾರಿಕೆಗಳಿಗೆ ವಿಶೇಷವಾಗಿ ಶೀಟ್ ಮೆಟಲ್, ಫ್ಯಾಬ್ರಿಕೇಶನ್ ಮತ್ತು ಆಟೋಮೊಬೈಲ್ ವಲಯದ ಘಟಕಗಳಿಗೆ ಪ್ರತ್ಯೇಕ ಕೋಟಾವನ್ನು ನಿಗದಿಪಡಿಸಿ ಎಂದು ಕಾಸಿಯಾ ಸರ್ಕಾರಕ್ಕೆ ಮನವಿ ಮಾಡಿದೆ.

 Rescue MSMEs from hardship: appeals to government
Rescue MSMEs from hardship: appeals to government

By

Published : May 27, 2021, 4:10 PM IST

ಬೆಂಗಳೂರು: ಎಂಎಸ್‌ಎಂಇಗಳನ್ನು ಸಂಕಷ್ಟದಿಂದ ಪಾರು ಮಾಡುವಂತೆ ಪ್ರಧಾನ ಮಂತ್ರಿ, ಹಣಕಾಸು ಸಚಿವೆ, ಸಂಬಂಧಿತ ಸಚಿವಾಲಯಗಳಿಗೆ ಕಾಸಿಯಾ ಮನವಿ ಸಲ್ಲಿಸಿದೆ ಎಂದು ಕಾಸಿಯಾ ಅಧ್ಯಕ್ಷ ಕೆ. ಬಿ. ಅರಸಪ್ಪ ತಿಳಿಸಿದ್ದಾರೆ.

ಪತ್ರದ ಮುಖಾಂತರ ಸಲಹೆಗಳನ್ನು ಒಟ್ಟಾರೆಯಾಗಿ ಪರಿಗಣಿಸುವಂತೆ ಕಾಸಿಯಾ ಕೇಂದ್ರವನ್ನು ಪತ್ರದ ಮೂಲಕ ಕೋರಿದೆ.

ಹಣಕಾಸು ವಿಚಾರ:

ಕೋವಿಡ್ ಎರಡನೇ ಅಲೆಯು ಮೊದಲ ಅಲೆಗಿಂತ ಹೆಚ್ಚು ಮಾರಕವಾಗಿರುವುದರಿಂದ ಎಂಎಸ್‌ಎಂಇ ಗಳಿಗಾಗಿ ಕಳೆದ ವರ್ಷ ಘೋಷಿಸದ ಪರಿಹಾರ ಪ್ಯಾಕೇಜ್ ಅನ್ನು ವಿಸ್ತರಿಸಿ, ಏಪ್ರಿಲ್, 2021 ರಿಂದ ಜುಲೈ,2021 ರ ವರೆಗೆ ಅವದಿ ಸಾಲಗಳು, ದುಡಿಮೆ ಬಂಡವಾಳ ಮೇಲಿನ ಬಡ್ಡಿ ಮನ್ನಾ ಮಾಡಲು ಅನುಮತಿ ನೀಡಬೇಕು ಮತ್ತು ಮುಂದಿನ 6 ತಿಂಗಳವರೆಗೆ ಸಾಲ ಮರುಪಾವತಿಯನ್ನು ಮುಂದೂಡಿ, ಮುಂದಿನ ಎರಡು ವರ್ಷಗಳವರೆಗೆ ಎಂಎಸ್‌ಎಂಇ ಸಾಲಗಾರರಿಗೆ ಎಲ್ಲ ರೀತಿಯ ಸಾಲಗಳ ಮೇಲೆ 6ರಷ್ಟು ಮೃದು ಸಾಲವನ್ನು ನೀಡಿ ಎಂದು ಮನವಿ ಮಾಡಲಾಗಿದೆ.

ಎಂಎಸ್‌ಎಂಇಗಳು ನೇರ ಅಳಿವಿನ ಭೀತಿಯಲ್ಲಿವೆ, ಇದು ದೇಶದ ಆರ್ಥಿಕತೆಯ ಮೇಲೆ ಮತ್ತು ಸಮಾಜದ ಸಾಮಾಜಿಕ ಸ್ಥತಿಯ ಮೇಲೆ ಹಾನಿಕಾರಕ ಪರಿಣಾಮ ಬೀರಲಿದೆ. ಎಲ್ಲಾ ಸ್ಲ್ಯಾಬ್‌ಗಳಲ್ಲಿ ಟಿಡಿಎಸ್ ಅನ್ನು ಶೇಕಡಾ 50 ರಷ್ಟು ಕಡಿಮೆ ಮಾಡಲು ಕೋರಿದ್ದೇವೆ ಎಂದಿದ್ದಾರೆ.

ಕಾರ್ಮಿಕ ವರ್ಗ:

ಎಂಎಸ್‌ಎಂಇ ವಲಯದ ನೌಕರರಿಗೆ ಮೇ 2021 ರಿಂದ ಜುಲೈ 2021 ರವರೆಗೆ 3 ತಿಂಗಳುಗಳ ಕಾಲ ಗರಿಷ್ಠ 15,000 ರೂಗಳ ಮಾಸಿಕ ವೇತನ ಬೆಂಬಲವನ್ನು ಒದಗಿಸಿ. ಎಂಎಸ್‌ಎಂಇ ಘಟಕಗಳು ಮತ್ತು ನೌಕರರ ಪರವಾಗಿ ಮೇ, 2021 ರಿಂದ ಜುಲೈ, 2021 ರವರೆಗೆ ಇಎಸ್‌ಐ / ಪಿಎಫ್‌ಗೆ ಉದ್ಯೋಗದಾತರ ಮತ್ತು ನೌಕರರ ಕೊಡುಗೆಯನ್ನು ಸರ್ಕಾರದ ವತಿಯಿಂದ ಪಾವತಿಸಬೇಕಿದೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

ಕಳೆದ ಆರು ತಿಂಗಳುಗಳಲ್ಲಿ ಡೀಸೆಲ್/ಪೆಟ್ರೋಲ್ ಬೆಲೆಯು ಸುಮಾರು ಶೇಕಡಾ 40 ರಷ್ಟು ಏರಿಕೆಯಾಗಿದ್ದು, ಇಂಧನ ಬೆಲೆ ಕಡಿಮೆ ಮಾಡಲು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್/ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಿ ಹಾಗೂ ಕೇಂದ್ರವು ರಾಜ್ಯಗಳೊಂದಿಗೆ ಚರ್ಚಿಸಿ ಡೀಸೆಲ್/ಪೆಟ್ರೋಲ್ ಅನ್ನು ಜಿ.ಎಸ್.ಟಿ. ಅಡಿ ತರಲು ಅಗತ್ಯ ಕ್ರಮ ಕೈಗೊಳ್ಳಲು ಕೋರಿದೆ.

ನಿರಂತರವಾಗಿ ಏರುತ್ತಿರುವ ಉಕ್ಕು, ಪ್ಲಾಸ್ಟಿಕ್ ಮತ್ತು ಕೈಗಾರಿಕಾ ಕಚ್ಚಾ ಸಾಮಗ್ರಿಗಳ ಬೆಲೆಯನ್ನು ನಿಯಂತ್ರಿಸಿ, ಸೂಕ್ತ ಬೆಲೆ ನಿಗದಿಪಡಿಸಿ ಮತ್ತು ಆಮ್ಲಜನಕ ಸಿಲಿಂಡರ್‌ಗಳನ್ನು ಬಳಸುವ ಕೈಗಾರಿಕೆಗಳಿಗೆ ವಿಶೇಷವಾಗಿ ಶೀಟ್ ಮೆಟಲ್, ಫ್ಯಾಬ್ರಿಕೇಶನ್ ಮತ್ತು ಆಟೋಮೊಬೈಲ್ ವಲಯದ ಘಟಕಗಳಿಗೆ ಪ್ರತ್ಯೇಕ ಕೋಟವನ್ನು ನಿಗದಿಪಡಿಸಿ ಎಂದು ಮನವಿ ಮಾಡಲಾಗಿದೆ.

ರಾಜ್ಯ ಸರ್ಕಾರಕ್ಕೆ ಮನವಿ:

ರಾಜ್ಯ ಜಿಡಿಪಿಗೆ ಕೊಡುಗೆ ನೀಡುವಲ್ಲಿ ಎಂಎಸ್‌ಎಂಇ ವಲಯ ಕೃಷಿ ಕ್ಷೇತ್ರದ ನಂತರದ ಸ್ಥಾನದಲ್ಲಿದೆ ಎಂಬ ಕಾರಣಕ್ಕೆ, ಕೆಎಸ್‌ಎಫ್‌ಸಿಯಿಂದ ಎಂಎಸ್‌ಎಂಇಗಳಿಗೆ ದುಡಿಮೆ ಬಂಡವಾಳದ ಸಾಲವನ್ನು ಶೇ 4 ದರದಲ್ಲಿ ನೀಡಲು, ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಲು ಮತ್ತು ಮೇ, 2021 ರಿಂದ ಜುಲೈ, ವರೆಗೆ, 3 ತಿಂಗಳ ಕಾಲ ಜವಳಿ ಉದ್ಯಮಕ್ಕೆ ವೇತನ ಬೆಂಬಲವನ್ನು ನೀಡುವಂತೆ ಕಾಸಿಯಾ ಮುಖ್ಯ ಮಂತ್ರಿಗಳನ್ನು ಈಗಾಗಲೇ ಒತ್ತಾಯಿಸಿದೆ.

ABOUT THE AUTHOR

...view details