ಬೆಂಗಳೂರು:ಕೆಂಗೇರಿ ಹೋಬಳಿಯ ಸರ್ವೆ ನಂಬರ್ 137ರಲ್ಲಿ 305 ಎಕರೆ ಸರ್ಕಾರಿ ಜಮೀನನ್ನು ಕಬಳಿಸಿದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ರಾಜ್ಯ ವಿಧಾನ ಸಭೆಯ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಎ.ಟಿ ರಾಮಸ್ವಾಮಿ ಹೇಳಿದರು.
ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಎ.ಟಿ.ರಾಮಸ್ವಾಮಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಶಿಸ್ತು ಬದ್ಧ ಕ್ರಮ ತೆಗೆದುಕೊಳ್ಳುವಂತೆ ಖಡಕ್ ಎಚ್ಚರಿಕೆ ನೀಡಿದರು. ಸಭೆ ಪ್ರಾರಂಭವಾಗುವ ಮುನ್ನ ಸಾಹಿತಿ ಗಿರೀಶ್ ಕಾರ್ನಾಡ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
18 ಕಿ.ಮೀ ಒಳಗೆ ಕೃಷಿ ಭೂಮಿ ಮಂಜೂರು ಮಾಡಲು ಕಾಯ್ದೆಯಲ್ಲಿ ಅವಕಾಶವಿಲ್ಲ. ಆದರೂ ಮಂಜೂರು ಮಾಡಲಾಗಿದೆ. ತಹಶೀಲ್ದಾರ್ ಅಕ್ಟೋಬರ್ ತಿಂಗಳಿನಲ್ಲಿ 10 ಬಾರಿ ವಿಚಾರಣೆ ಮಾಡಿದ್ದಾರೆ. ಇದು ಸರ್ಕಾರದ ಪರ ಆದೇಶ ನೀಡಲು ಅಲ್ಲ. ಬದಲಾಗಿ ಬೇರೆಯವರಿಗೆ ಸರ್ಕಾರಿ ಜಾಗ ಪರಭಾರೆ ಮಾಡಲು ಎಂದು ಸಭೆಯಲ್ಲಿದ್ದ ಅಧಿಕಾರಿಗಳನ್ನು ರಾಮಸ್ವಾಮಿ ತರಾಟೆಗೆ ತೆಗೆದುಕೊಂಡರು.
ಸರ್ಕಾರಿ ಕಾಯ್ದೆಗಳನ್ನು ಮರೆಮಾಚಿ ಆದೇಶ ನೀಡಲಾಗಿದೆ ಎಂದು ಕಿಡಿಕಾರಿದರು. ನಾಗಮ್ಮ ಮತ್ತು ಮೋಟಮ್ಮ ಹಿಡುವಳಿಯಲ್ಲಿದ್ದಾರೆ ಎಂದು ವಿಶೇಷ ಡಿಸಿ ಆದೇಶದಲ್ಲಿ ಹೇಳುತ್ತಿದ್ದಾರೆ. ಇದು ಸಂಪೂರ್ಣ ತಪ್ಪು ಆದೇಶ. ಸರ್ಕಾರಿ ಆಸ್ತಿ ರಕ್ಷಣೆ ಮಾಡಬೇಕಾದವರೇ ಅಕ್ರಮ ಪರಭಾರೆ ಮಾಡಲು ಹೊರಟಿದ್ದಾರೆ. ಕಂದಾಯ ಸಚಿವರ ಸದನದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರೂ ಇನ್ನೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ನಡುವೆ ಮಾತನಾಡಿದ ಇಲಾಖೆ ಅಧಿಕಾರಿ ರಶ್ಮಿ ಮಹೇಶ್,ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಿ ಕ್ರಮ ಕುರಿತು ಮಾಹಿತಿ ನೀಡುತ್ತೇನೆ ಎಂದರು. ಇದೇ ವೇಳೆಅಧಿಕಾರಿಗಳ ಭರವಸೆಗೆ ಸಮ್ಮತಿ ನೀಡಿದ ಎ.ಟಿ.ರಾಮಸ್ವಾಮಿ ಮುಂದಿನ ಸಭೆ ವೇಳೆಗೆ ಸಮಜಾಯಿಷಿ ಅಲ್ಲ ಕ್ರಮದ ಮಾಹಿತಿ ನೀಡಬೇಕು ಎಂದು ಸೂಚಿಸಿದರು. ಅಧಿಕಾರಿಗಳ ಜೊತೆ ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ಸ್ಥಳ ಪರಿಶೀಲನೆಗೆ ತೆರಳಿದರು.