ಬೆಂಗಳೂರು: ಒಂದು ವರ್ಷದಿಂದ 15 ಸಾವಿರ ಕುಟುಂಬಕ್ಕೆ ರೇಷನ್ ಕಿಟ್ ಹಂಚಿ ಬಡವರ ಹಸಿವನ್ನ ನೀಗಿಸುತ್ತಿರುವ ಶಿಶು ಮಂದಿರ ಸಂಸ್ಥೆ ಕಳೆದ ಒಂದು ವರ್ಷದಿಂದ ಬಡವರ ಪಾಲಿನ ಆಪದ್ಬಾಂಧವನಾಗಿದೆ.
ಆಪತ್ತಿಗಾದವನೇ ಆಪದ್ಬಾಂಧವ ಅನ್ನೋ ಮಾತಿನಂತೆ ಕೊರೊನಾ ಕಷ್ಟ ಕಾಲದಲ್ಲಿ ಒಪ್ಪೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದಾಗ ಮಹದೇವಪುರ ಕ್ಷೇತ್ರದ ಕಿತ್ತಗನೂರಿನಲ್ಲಿರುವ ಶಿಶುಮಂದಿರ ಸಂಸ್ಥೆ ಫುಡ್ ಕಿಟ್ಗಳನ್ನ ವಿತರಿಸಿ ಜನರ ಹಸಿವು ನೀಗಿಸುವ ಪುಣ್ಯದ ಕೆಲಸ ಮಾಡುತ್ತಿದೆ. ಶಿಶುಮಂದಿರ ಮತ್ತು ಟೆಕ್ ಮಹೀಂದ್ರ ಸಂಸ್ಥೆ ಕಳೆದ ಒಂದು ವರ್ಷದಿಂದ ಕಿತ್ತಗನೂರು, ಕೆ.ಆರ್. ಪುರ, ಭಟ್ಟರಹಳ್ಳಿ, ಜ್ಯೋತಿ ನಗರ, ಹಳೆ ಹಳ್ಳಿ ಮಾರಗೊಂಡಹಳ್ಳಿ, ಸುತ್ತಮುತ್ತಲಿನ ಅನೇಕ ಹಳ್ಳಿಗಳಿಗೆ ಭೇಟಿ ನೀಡಿ, ಕಡು ಬಡವರನ್ನು ಗುರುತಿಸಿ ಫುಡ್ ಕಿಟ್ ವಿತರಿಸಿದೆ. ಕೊರೊನಾ ಬಿಕ್ಕಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ಸಂಸ್ಥೆ ಈ ಕಾರ್ಯ ಮಾಡುತ್ತ ಬಂದಿರುವುದು ಶ್ಲಾಘನೀಯ.
ಶಿಶುಮಂದಿರ ಸಂಸ್ಥೆಯು ಕೊರೊನಾ ಆರಂಭವಾದ ಮೇಲೆ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದಾಗ ಅವರ ನೆರವಿಗೆ ನಿಂತಿದೆ. ಅಂಗವಿಕಲರು, ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಮಂಗಳಮುಖಿಯರು, ಸ್ಲಂ ನಿವಾಸಿಗಳಿಗೆ ಮತ್ತು ತಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ, ಕೆಲಸ ಮಾಡುವ ಸಿಬ್ಬಂದಿಗಳಿಗೆ ರೇಷನ್ ಕಿಟ್ಗಳನ್ನು ನೀಡುತ್ತಾ ಬಂದಿದೆ.
ಇವರ ಸಮಾಜ ಸೇವೆ ನೋಡಿ ಟೆಕ್ ಮಹೀಂದ್ರ ಸಂಸ್ಥೆ ಶಿಶುಮಂದಿರ ಜೊತೆಗೂಡಿ ಕಳೆದ 6 ತಿಂಗಳಿಂದ 2,500 ರೇಷನ್ ಕಿಟ್ಗಳನ್ನ ನೀಡಿದೆ. ಈಗ ಮತ್ತೆ ಎರಡನೇ ಅಲೆ ಆರಂಭವಾದರಿಂದ ಟೆಕ್ ಮಹೀಂದ್ರ ಸಂಸ್ಥೆ, ಶಿಶುಮಂದಿರ ಜೊತೆಗೆ ಸೇರಿ ಹತ್ತು ಹಳ್ಳಿಗಳಿಂದ ಸುಮಾರು 500 ಕುಟುಂಬಕ್ಕೆ ಇವತ್ತು ಅಕ್ಕಿ, ಗೋಧಿ, ಧಾನ್ಯ, ಎಣ್ಣೆಯನ್ನು ನೀಡಿತು. ಸೇವಾಮನೋಭಾವದಲ್ಲಿ ಪಡೆದ ಆಹಾರ ಪದಾರ್ಥಗಳನ್ನು ಶಿಶುಮಂದಿರ ಸಂಸ್ಥೆ ಬಡವರನ್ನು ಸರ್ವೇ ಮಾಡಿ ಅರ್ಹ ಫಲಾನುಭವಿಗಳಿಗೆ ಇಂದು ವಿತರಿಸಿತು.