ವಯನಾಡ್(ಕೇರಳ):ಉತ್ತರಪ್ರದೇಶದ ಅಮೇಥಿ ಕ್ಷೇತ್ರದ ಜತೆಗೆ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ರಾಹುಲ್ ಗಾಂಧಿ, ಇಂದು ಅಬ್ಬರದ ಪ್ರಚಾರ ನಡೆಸಿದರು.
ಕೇರಳದ ವಯನಾಡುವಿನಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾಗುವುದಕ್ಕೂ ಮುನ್ನ ರಾಹುಲ್ ಗಾಂಧಿ ಟೆಂಪಲ್ ರನ್ ನಡೆಸಿದರು. ತಿರುನೆಲ್ಲಿ ವಿಷ್ಣು ದೇವಾಲಯಕ್ಕೆ ಭೇಟಿ ನೀಡಿದ ರಾಗಾ, ಪೂಜೆ ಸಲ್ಲಿಕೆ ಮಾಡಿದರು. ಈ ವೇಳೆ ಬಿಳಿ ಪಂಚೆ, ಧೋತಿ ಧರಿಸಿದ್ದರು. ಅವರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಸಾಥ್ ನೀಡಿದರು.
ಇದಾದ ಬಳಿಕ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಾನು ಇಲ್ಲಿಗೆ ರಾಜಕಾರಣಿಯಾಗಿ ಬಂದಿಲ್ಲ. ನೀವು ಏನು ಮಾಡಬೇಕು ಎಂದು ನಾನು ಹೇಳುವ ಅವಶ್ಯಕತೆ ಇಲ್ಲ. ನನ್ನ ಮನ್ ಕೀ ಬಾತ್ ಹೇಳುವ ಬದಲು ನಿಮ್ಮ ಹೃದಯದ ಮಾತು ಕೇಳುವ ಅವಶ್ಯಕತೆ ಇದೆ ಎಂದರು.
ನಾನು ಪ್ರಧಾನಿ ಮೋದಿ ರೀತಿ ಅಲ್ಲ. ಅವರ ಹಾಗೇ ಸುಳ್ಳು ಹೇಳಲು ನನಗೆ ಬರುವುದಿಲ್ಲ. ಕೆಲ ದಿನಗಳು ಮಾತ್ರ ನಿಮ್ಮೊಂದಿಗೆ ಸಂಬಂಧವಿಟ್ಟುಕೊಳ್ಳುವ ಅವಶ್ಯಕತೆ ಕೂಡ ನನಗಿಲ್ಲ. ಸಾಯುವವರೆಗೂ ಸಂಬಂಧ ಮುಂದುವರೆಸುವ ಅವಶ್ಯಕತೆ ನನಗಿದೆ ಎನ್ನುವ ಮೂಲಕ ಮತದಾರರ ಹೃದಯ ತಲುಪುವ ಪ್ರಯತ್ನ ಮಾಡಿದರು.