ಸೌತಮ್ಟನ್: ವಿಶ್ವಕಪ್ನಲ್ಲಿಂದು ಭಾರತ ತಂಡ ತನ್ನ ಮೊದಲ ಪಂದ್ಯವಾಡುತ್ತಿದ್ದು, ಕೊಹ್ಲಿ ಪಡೆಗೆ ಆಫ್ರಿಕಾ ಆರಂಭಿಕ ಬ್ಯಾಟ್ಸ್ಮನ್ ಡಿ ಕಾಕ್ ಭಯ ಕಾಡುತ್ತಿದೆ.
ಭಾರತದ ವಿರುದ್ಧ ತವರಿನಲ್ಲಾಗಲೀ ಅಥವಾ ಅಥವಾ ಭಾರತದಲ್ಲೇ ಆಗಲಿ, ಡಿ ಕಾಕ್, ಭಾರತೀಯ ಬೌಲರ್ಗಳನ್ನು ಕೆಚ್ಚೆದೆಯಿಂದ ದಂಡಿಸಿ ಧಾರಾಳವಾಗಿ ರನ್ ಗಳಿಸುತ್ತಾರೆ. ಭಾರತದ ವಿರುದ್ಧ 12 ಪಂದ್ಯ ಆಡಿರುವ ಈ ಎಡಗೈ ಬ್ಯಾಟ್ಸ್ಮನ್ 774 ರನ್ ಗಳಿಸಿದ್ದಾರೆ.
26 ವರ್ಷದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಟೀಮ್ ಇಂಡಿಯಾ ವಿರುದ್ಧ ಸತತ ಮೂರು ಶತಕ ಸೇರಿದಂತೆ ಒಟ್ಟಾರೆ 5 ಶತಕ ಹಾಗೂ 1 ಅರ್ಧಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. 64.5 ಸರಾಸರಿಯಲ್ಲಿ ರನ್ ಗಳಿಸಿರುವ ಡಿ ಕಾಕ್ ನಿಜಕ್ಕೂ ಭಾರತಕ್ಕೆ ಸವಾಲೊಡ್ಡುವ ಬ್ಯಾಟ್ಸ್ಮನ್ ಆಗಿದ್ದಾರೆ.
2013 ರಲ್ಲಿ ಭಾರತ, ಆಫ್ರಿಕಾ ಪ್ರವಾಸ ಕೈಗೊಂಡಿದ್ದ ವೇಳೆ ಸತತ 3 ಶತಕ ಸಿಡಿಸಿದ್ದಾಗ ಟೀಮ್ ಇಂಡಿಯಾದಲ್ಲಿದ್ದ ಪ್ರಮುಖ ಬೌಲರ್ಗಳಾದ ಭುವನೇಶ್ವರ್, ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜಾ ಇಂದು ನಡೆಯುವ ಪಂದ್ಯದಲ್ಲೂ ಇರುವುದರಿಂದ ಡಿ ಕಾಕ್ ಸುಲಭವಾಗಿ ಬ್ಯಾಟ್ ಬೀಸಲಿದ್ದಾರೆ.
ಡಿ ಕಾಕ್ ಜೊತೆಗೆ ಮತ್ತೊಬ್ಬ ಆರಂಭಿಕ ಆಟಗಾರ ಹಾಶಿಮ್ ಆಮ್ಲ(932 ರನ್) ನಾಯಕ ಡು ಪ್ಲೆಸಿಸ್(658 ರನ್) ಈ ಹಿಂದಿನ ಸರಣಿಗಳಲ್ಲಿ ಭಾರತದ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಇಂದಿನ ಪಂದ್ಯದಲ್ಲಿ ಗೆಲುವು ಕಾಣುವ ಲೆಕ್ಕಾಚಾರದಲ್ಲಿದ್ದಾರೆ.