ಪುರಿ(ಒಡಿಶಾ): ಪುರಿ ಅಂದ ತಕ್ಷಣ ಅಲ್ಲಿನ ವಿಶ್ವಪ್ರಸಿದ್ಧ ಜಗನ್ನಾಥ ಮಂದಿರ ನೆನಪಾಗುತ್ತದೆ. ಆದ್ರೆ, ನಿನ್ನೆ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ ದೇಗುಲಗಳ ನಗರಿಯಲ್ಲಿ ನಡುಗಿದೆ. ಯಾಕಂದ್ರೆ, ಅಷ್ಟರ ಮಟ್ಟಿಗೆ ಅಲ್ಲಿ ಅನಾಹುತ ಸಂಭವಿಸಿದ್ದು, ಪರಿಹಾರ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.
ಪುರಿಯಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗೋಕೆ ಸಾಧ್ಯವಾಗದೇ ಇರುವ ಪರಿಸ್ಥಿತಿ ಉದ್ಭವಿಸಿದೆ. ಇಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಎಲ್ಲೆಂದರಲ್ಲಿ ಮರಗಿಡಗಳು, ತಡೆಗೋಡೆಗಳು ಅಡ್ಡಾದಿಡ್ಡಿಯಾಗಿ ಬಿದ್ದಿವೆ. ವಿದ್ಯುತ್ ಕಂಬಗಳೆಲ್ಲಾ ಮುರಿದು ಬಿದ್ದಿವೆ. ರಸ್ತೆಗಳಲ್ಲಿ ವಾಹನ ಸಂಚಾರ ಸಾಧ್ಯವಾಗದ ಪರಿಸ್ಥಿತಿ ಇದೆ. ದೂರವಾಣಿ ಸಂಪರ್ಕವೂ ಇಲ್ಲದೆ, ಜನರಿಗೆ ತಮ್ಮ ಬಂಧುಗಳು ಹಾಗು ಪ್ರೀತಿ ಪಾತ್ರರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ನಾಲ್ಕು ಚಕ್ರದ ವಾಹನಗಳು ಪುರಿ ನಗರದ ಸಮೀಪ ಹೋಗಬಹುದೇ ಹೊರತು ನಗರದ ಒಳಗಡೆ ಸಂಚಾರ ಸಾಧ್ಯವಿಲ್ಲ. ಚಂಡಮಾರುತದಿಂದ ಸಂಕಷ್ಟಕ್ಕೊಳಗಾದ ರಾಜ್ಯದ ಅನೇಕ ಜಿಲ್ಲೆಗಳನ್ನು ಸಂಪರ್ಕಿಸಲು ಇನ್ನೂ ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ.
ಮೀನುಗಾರರಿಗೆ ತೊಂದರೆ..!
ಮೀನುಗಾರರ ಸಮುದಾಯ ಕೂಡಾ ತುಂಬಾ ತೊಂದರೆಗೊಳಗಾಗಿದೆ. ಸಮುದ್ರ ತೀರದಲ್ಲಿದ್ದ ದೋಣಿಗಳೆಲ್ಲಾ ಮನೆಯ ಮೇಲೆಲ್ಲಾ ಮಗುಚಿ ಬಿದ್ದಿದೆ. ಇನ್ನೊಂದೆಡೆ ಸಂತ್ರಸ್ತರಿಗೆ ಜಿಲ್ಲಾಡಳಿತ ರೆಡಿ ಟು ಈಟ್ ಆಹಾರಗಳನ್ನು ಪೂರೈಕೆ ಮಾಡುತ್ತಿದೆ.
ಭುವನೇಶ್ವರದಲ್ಲಿ ಹೇಗಿದೆ ಪರಿಸ್ಥಿತಿ..?
ರಾಜಧಾನಿ ಭುವನೇಶ್ವರದ ಪರಿಸ್ಥಿತಿ ಪುರಿಗಿಂತ ಭಿನ್ನವಾಗಿಲ್ಲ. ಇಲ್ಲಿನ ಕೊಳೆಗೇರಿಗಳಲ್ಲಿ ವಾಸವಾಗಿದ್ದ ಲಕ್ಷಾಂತರ ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇಲ್ಲಿನ ಮನೆಗಳ ಮೇಲಿನ ಛಾವಣಿಗಳೆಲ್ಲಾ ಹಾರಿ ಹೋಗಿವೆ.
ಸದ್ಯಕ್ಕೆ ಒಟ್ಟು ಸಾವುನೋವಿನ ಬಗ್ಗೆ ಅಧಿಕೃತ ಅಂಕಿ ಅಂಶಗಳು ಇಲ್ಲದೇ ಇದ್ದರೂ, 20 ಜನ ಪ್ರಾಣ ಕಳೆದುಕೊಂಡಿರುವ ಬಗ್ಗೆ ಅಂದಾಜಿಸಲಾಗಿದೆ.
ಫಣಿ ಚಂಡಮಾರುತದ ಹಿನ್ನೆಲೆಯಲ್ಲಿ 12 ಲಕ್ಷ ಜನರನ್ನು ಸ್ಥಳಾಂತರಗೊಳಿಸಿದ್ದು, 30 ಲಕ್ಷಕ್ಕೂ ಹೆಚ್ಚು ಜನಜೀವನದ ಮೇಲೆ ಭಾರಿ ಪರಿಣಾಮ ಉಂಟಾಗಿದೆ.
ಸಿಎಂ ನವೀನ್ ಪಟ್ನಾಯಕ್ ಮಾತನಾಡಿ, ಇದೊಂದು ಅಪರೂಪದಲ್ಲಿ ಅಪರೂಪದ ಚಂಡ ಮಾರುತವಾಗಿದ್ದು, ಕಳೆದ 43 ವರ್ಷಗಳಲ್ಲಿ ಅಪ್ಪಳಿಸಿದ ಭೀಕರ ಪ್ರಾಕೃತಿಕ ವಿಕೋಪವಾಗಿದೆ. ಕಳೆದ 150 ವರ್ಷಗಳಲ್ಲಿ ಬಂದೆರಗಿದ ಮೂರು ಭೀಕರ ಚಂಡಮಾರುತಗಳಲ್ಲಿ ಇದೂ ಒಂದು ಎಂದು ಹೇಳಿದ್ದಾರೆ.
ಗಂಟೆಗೆ 200 ಕಿಲೋ ಮೀಟರುಗಳಿಗೂ ವೇಗವಾಗಿ ಬಂದ ಫಣಿ ಚಂಡಮಾರುತ ನಿನ್ನೆ ಪುರಿ ತೀರಕ್ಕೆ ಅಪ್ಪಳಿಸಿತ್ತು.