ಪುಣೆ(ಮಹಾರಾಷ್ಟ್ರ):ಅದಿನ್ನೂ ಅಂಬೆಗಾಲಿಡುವ ಮಗು, ತಂದೆ ಯಾವುದೋ ಕೆಲಸ ನಿಮಿತ್ತ ಊರಿಗೆ ತೆರಳಿದ್ದ. ಆದ್ರೆ ಇತ್ತ ತಾಯಿಯ ಶವದೊಂದಿಗೆ ಮಗು ಎರಡು ದಿನ ಕಳೆದಿತ್ತು. ಊರವರಾರೂ ಕೂಡಾ ನೋಡಲೂ ಬಂದಿರದ ಅಸಹಾಯಕ ಪರಿಸ್ಥಿತಿ ಅಲ್ಲಿ ತಾಂಡವವಾಡುತ್ತಿತ್ತು.
ಇದು ಪುಣೆಯ ಪಿಂಪ್ರಿಯ ಚಿಂಚ್ವಾಡ ಜಿಲ್ಲೆಯ ಫ್ಯೂಜ್ ವಸ್ತಿ ಎಂಬಲ್ಲಿ ನಡೆದ ಘಟನೆ. ಅನಾರೋಗ್ಯದಿಂದ ಮರಣ ಹೊಂದಿದ ತಾಯಿಯ ಶವದ ಬಳಿ ಒಂದೂವರೆ ವರ್ಷದ ಮಗುವೊಂದು ಅನಾಥವಾಗಿತ್ತು. ವಿಷಯ ತಿಳಿದ ಪೊಲೀಸ್ ಇಲಾಖೆಯ ಮಹಿಳಾ ಕಾನ್‌ಸ್ಟೆಬಲ್ ಇಬ್ಬರು ಮಗುವನ್ನು ರಕ್ಷಿಸಿದ್ದಾರೆ.
ಮಗುವಿನ ತಾಯಿ ಒಂದೆರಡು ದಿನಗಳ ಹಿಂದೆ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅದು ಅಂಬೆಗಾಲಿಡುವ ಮಗುವಾಗಿರುವುದರಿಂದ ಅದಕ್ಕೆ ಏನೂ ತಿಳಿಯದಾಗಿದೆ ಎಂದು ತಿಳಿಸಿದ್ದಾರೆ.
ಶನಿವಾರ ಮನೆಯಿಂದ ದುರ್ವಾಸನೆ ಬೀರಲು ಪ್ರಾರಂಭಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ತಾಯಿಯ ಮೃತ ದೇಹದ ಬಳಿ ಮಗು ಮಲಗಿರುವುದನ್ನು ನೆರೆಹೊರೆಯವರು ಗಮನಿಸಿದ್ದರು, ಆದರೆ, ಕೋವಿಡ್‌ಗೆ ಹೆದರಿ ಅವರು, ಎರಡು ದಿನಗಳವರೆಗೆ ಹಸಿವಿನಿಂದ ಬಳಲುತ್ತಿದ್ದ ಮಗುವಿಗೆ ಸಹಾಯ ಮಾಡುವ ಮಾನವೀಯತೆಯನ್ನೂ ತೋರಿರಲಿಲ್ಲ.
ಇನ್ನು ಮೃತ ಮಹಿಳೆ, ಸರಸ್ವತಿ ರಾಜೇಶ್ ಕುಮಾರ್ (29) ಎಂದು ಗುರುತಿಸಲಾಗಿದ್ದು, ಈಕೆ ತನ್ನ ಪತಿ ಹಾಗೂ ಮಗನೊಂದಿಗೆ ವಾಸಿಸುತ್ತಿದ್ದರು. ಪತಿಯು ಯಾವುದೋ ವೈಯಕ್ತಿಕ ಕೆಲಸಕ್ಕಾಗಿ ತನ್ನ ಊರು ಉತ್ತರ ಪ್ರದೇಶದಕ್ಕೆ ತೆರಳಿದ್ದನು.
ಎರಡು ದಿನಗಳ ಕಾಲ ಮನೆಯ ಬಾಗಿಲು ಮುಚ್ಚಲಾಗಿತ್ತು. ಆದರೆ, ಒಳಗಿನಿಂದ ದುರ್ವಾಸನೆ ಬರಲು ಪ್ರಾರಂಭಿಸಿದಾಗ ನೆರೆಹೊರೆಯವರಿಗೆ ಅನುಮಾನ ಬಂದಿತ್ತು. ಮಗು ಮನೆಯೊಳಗೆ ಓಡಾಡುವುದನ್ನೂ ಕಂಡವರಿದ್ದಾರೆ. ಆದರೂ ಯಾರೂ ಅತ್ತ ಸುಳಿದಿರಲಿಲ್ಲ. ಆದ್ರೆ ತೀವ್ರ ಅನಾರೋಗ್ಯದಿಂದಾಗಿ ಮಹಿಳೆ ಮೃತಪಟ್ಟಿದ್ದಾಳೆ.
ಬಳಿಕ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತಲುಪಿದ ಪೊಲೀಸರು ಹಸಿವಿನಿಂದ ಕಂಗೆಟ್ಟಿದ್ದ ಮಗುವಿಗೆ ಹಾಲು ಮತ್ತು ಬಿಸ್ಕತ್ತುಗಳನ್ನು ತಿನ್ನಿಸಿ ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಕೊರೊನಾಗೆ ಹೆದರಿ ನೆರೆಹೊರೆಯವರು ಯಾರೂ ಕಾಣಲು ಬಂದಿಲ್ಲವೆಂದು ತಿಳಿಸಿದ್ದಾರೆ. ಓ ನಡುವೆ ಮಗುವಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ರಿಪೋರ್ಟ್ ನೆಗೆಟಿವ್ ಬಂದಿದೆ. ಸದ್ಯ ಪೊಲೀಸರು ಆತನನ್ನು ಮಕ್ಕಳ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.
ಪೊಲೀಸರು ಮೃತ ವ್ಯಕ್ತಿಯ ಪತಿಯನ್ನು ಸಂಪರ್ಕಿಸಿ, ಶವಪರೀಕ್ಷೆ ವರದಿ ಪಡೆದ ನಂತರ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಆದ್ರೆ ಮಹಿಳೆ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.