ನವದೆಹಲಿ: ಪುಲ್ವಾಮಾದಲ್ಲಿ ಉಗ್ರರ ನಡೆಸಿದ ಹೀನ ಕೃತ್ಯ 2 ದಶಕದಲ್ಲೇ ಅತೀ ದೊಡ್ಡದು. ಆದ್ರೇ, ಆಘಾತಕಾರಿ ಅಂದ್ರೇ ಕಳೆದ 5 ವರ್ಷದಲ್ಲಿ ಜಮ್ಮು-ಕಾಶ್ಮೀರದಲ್ಲಿ ಉಗ್ರರಿಂದಾಗಿ ಭದ್ರತಾ ಪಡೆಯ ಯೋಧರು ಹುತಾತ್ಮರಾದ ಸಂಖ್ಯೆ ಕೇಳಿದ್ರೇ ಪ್ರತಿ ಭಾರತೀಯನ ರಕ್ತ ಕುದಿಯದೇ ಇರೋದಿಲ್ಲ.
ನರೇಂದ್ರ ಮೋದಿ ಸರ್ಕಾರದ ಅವಧಿ 2014-2018ರ ಮಧ್ಯೆ ಅತೀ ಹೆಚ್ಚು ಸೈನಿಕರು ಪ್ರಾಣ ಕಳ್ಕೊಂಡಿದ್ದಾರೆ. 5 ವರ್ಷದಲ್ಲಿ ಉಗ್ರರಿಂದಾಗಿ ಸೇನಾ ಪಡೆಗಳ ಯೋಧರ ಸಾವಿನ ಸಂಖ್ಯೆ ಶೇ. 176 ರಷ್ಟು ಹೆಚ್ಚಳವಾಗಿದೆ. ಪುಲ್ವಾಮಾ ದಾಳಿಯಲ್ಲಿ 49ಕ್ಕೂ ಹೆಚ್ಚು ಯೋಧರ ರಕ್ತ ಚೆಲ್ಲಿದೆ. ಐದು ವರ್ಷದಲ್ಲೇ ಇದು ಅತೀ ದೊಡ್ಡ ಕೃತ್ಯ. ಅಷ್ಟೇ ಅಲ್ಲ, ಈ ಅವಧಿಯಲ್ಲಿ ಶೇ. 93ರಷ್ಟು ಭದ್ರತಾ ಪಡೆ ಯೋಧರು ಜಮ್ಮು-ಕಾಶ್ಮೀರದಲ್ಲಿ ಉಗ್ರರ ಕೃತ್ಯಗಳಿಂದಾಗಿ ಸಾವನಪ್ಪಿದ್ದಾರೆ. ಐದು ವರ್ಷದಿಂದ ಕಣಿವೆ ರಾಜ್ಯದಲ್ಲಿ ನಿರಂತರ ಉಗ್ರರ ದಾಳಿ ನಡೆದಿವೆ ಅಂತ 2019 ಫೆಬ್ರವರಿ 5ರಂದು ಕೇಂದ್ರ ಸರ್ಕಾರವೇ ಈ ಅಂಕಿ-ಅಂಶಗಳನ್ನ ನೀಡಿದೆ.
ನರೇಂದ್ರ ಮೋದಿ ಆಡಳಿತಾವಧಿಯಲ್ಲೇ ಶೇ. 176ರಷ್ಟು ಉಗ್ರರ ಕೃತ್ಯ ಹೆಚ್ಚಳ ಕಂಡಿದೆ. ಈ ಐದು ವರ್ಷದಲ್ಲಿ 1,708 ಉಗ್ರ ಕೃತ್ಯಗಳು ನಡೆದಿವೆ. ಐದು ವರ್ಷದಲ್ಲಿ ಪ್ರತಿ ತಿಂಗಳು 28 ಉಗ್ರ ಕೃತ್ಯ ನಡೆದಿವೆ. ಅಂದ್ರೇ ಪ್ರತಿ ದಿನ ಒಂದಲ್ಲಾ ಒಂದು ಕಡೆಗೆ ಉಗ್ರರ ಅಟ್ಟಹಾಸ ನಡೆದಿವೆ ಅಂತ ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಹಂಸರಾಜ್ ಗಂಗಾರಾಮ್ ಅಹಿರ್ ಸಂಸತ್‌ಗೆ ಲಿಖಿತ ದಾಖಲೆ ನೀಡಿದ್ದಾರೆ.
2014ರಲ್ಲಿ 222 ಭಯೋತ್ಪಾದಕ ಕೃತ್ಯ ನಡೆದಿದ್ದವು. ಆದ್ರೇ, 2015ರಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿ 208 ಉಗ್ರ ಕೃತ್ಯ ನಡೆದಿವೆ. 2016ರಲ್ಲಿ ಮತ್ತೆ ವಿಧ್ವಂಸಕ ಕೃತ್ಯಗಳು ಶೇ.54.8ರಷ್ಟು ಏರಿಕೆಯಾಗಿದ್ದವು. ಆ ಒಂದೇ ವರ್ಷದಲ್ಲಿ 342 ಹಿಂಸಾಕೃತ್ಯ ನಡೆದಿದ್ದವು. 2017ರಲ್ಲಿ 79.53ರಷ್ಟು ಉಗ್ರ ಕೃತ್ಯ ನಡೆದಿವೆ. ಅಂದ್ರೇ ಈ ವರ್ಷವೂ 614 ಕೃತ್ಯವನ್ನ ಉಗ್ರರು ನಡೆಸಿದ್ದರು. ಆದ್ರೇ, 2018ರ ವೇಳೆಗೆ ಪ್ರತಿ ತಿಂಗಳು ಶೇ. 51ರಷ್ಟು ಉಗ್ರ ಕೃತ್ಯ ನಡೆದಿವೆ. ಐದು ವರ್ಷದಲ್ಲಿ ಭಯೋತ್ಪಾದಕ ದಾಳಿ ಹೆಚ್ಚಾದಂತೆ ಕಣಿವೆ ರಾಜ್ಯದಲ್ಲಿ ಸಾವು-ನೋವಿನ ಸಂಖ್ಯೆ ಹೆಚ್ಚಿತ್ತಿದೆ.