ಬಳ್ಳಾರಿ :ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಕೇಂದ್ರ ಸರ್ಕಾರವು 2021ನೇ ಮೇ ಮತ್ತು ಜೂನ್ ತಿಂಗಳಿಗೆ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳಿಗೆ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ.
ಅದರಂತೆ ಪಡಿತರ ಚೀಟಿದಾರರು ಪಡಿತರ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ಆಹಾರ ಭದ್ರತಾ ಕಾಯ್ದೆಯ ಅನ್ನಭಾಗ್ಯ ಯೋಜನೆ ಅಡಿ ರಾಜ್ಯ ಸರ್ಕಾರವು 2021 ಮೇ ತಿಂಗಳಿಗೆ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳಿಗೆ 2021 ಮೇ ತಿಂಗಳಲ್ಲಿ ಬಿಡುಗಡೆ ಮಾಡಿರುವ ಆಹಾರ ಧಾನ್ಯ ನೀಡಲಾಗುತ್ತಿದೆ. ಅದರ ವಿವರ ಇಂತಿದೆ.
ಆಹಾರ ಧಾನ್ಯದ ವಿವರ : ಅಂತ್ಯೋದಯ ಅನ್ನ- ಪ್ರತಿ ಪಡಿತರ ಚೀಟಿಗೆ 15 ಕೆಜಿ ಅಕ್ಕಿ, 20ಕೆಜಿ ಜೋಳ/ರಾಗಿ, ಆದ್ಯತಾ ಪಡಿತರ ಚೀಟಿ-ಪ್ರತಿ ಸದಸ್ಯನಿಗೆ 2 ಕೆಜಿ ಅಕ್ಕಿ ಮತ್ತು 3 ಕೆಜಿ ಜೋಳ,ರಾಗಿ, 2ಕೆಜಿ ಗೋದಿ ಉಚಿತವಾಗಿ ನೀಡಲಾಗುತ್ತದೆ.
ಪಡಿತರ ಪಡೆಯಲು ಒಪ್ಪಿಗೆ ಸೂಚಿಸದಿರುವ ಆದ್ಯತೇತರ ಪಡಿತರ ಚೀಟಿ (ಎಪಿ.ಲ್) ಏಕ ಸದಸ್ಯ ಚೀಟಿಗೆ 1 ಕೆಜಿಗೆ 15 ರೂ.ನಂತೆ 5 ಕೆಜಿ ಅಕ್ಕಿ, ದ್ವಿ ಸದಸ್ಯ ಪಡಿತರ ಚೀಟಿಗೆ 1 ಕೆಜಿಗೆ 15 ರೂಪಾಯಿಯಂತೆ 10 ಕೆಜಿ ಅಕ್ಕಿ ನೀಡಲಾಗುವುದು ಎಂದು ವಿವರಿಸಿದ್ದಾರೆ.
ಬಳ್ಳಾರಿ, ಕುರುಗೋಡು, ಸಂಡೂರು, ಸಿರುಗುಪ್ಪ, ಹೊಸಪೇಟೆ ಹಾಗೂ ಕಂಪ್ಲಿ ತಾಲೂಕಿನ ನ್ಯಾಯಬೆಲೆ ಅಂಗಡಿಗಳಿಗೆ ಜೋಳ ವಿತರಣೆ ಮಾಡಲಾಗುತ್ತದೆ ಹಾಗೂ ಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು ಹಾಗೂ ಹರಪನಹಳ್ಳಿ ನ್ಯಾಯಬೆಲೆ ಅಂಗಡಿಗಳಿಗೆ ರಾಗಿ ವಿತರಿಸಲಾಗುವುದು.
ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಸ್ತುಗಳನ್ನು ತಿಂಗಳ ಆರಂಭದಿಂದ ಅಂತ್ಯದವರೆಗೆ ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ನ್ಯಾಯಬೆಲೆ ಅಂಗಡಿಗಳ ಸರ್ಕಾರಿ ರಜಾ ದಿನ ಸೇರಿ ಎಲ್ಲ ದಿನಗಳಲ್ಲಿಯೂ ಸಹ ಸರ್ಕಾರ ನಿಗದಿಪಡಿಸಿರುವ ಸಮಯದಲ್ಲಿ ಕಾರ್ಯನಿರ್ವಹಿಸಲು ತಿಳಿಸಲಾಗಿದೆ.
ಪಡಿತರವನ್ನು ಪಡಿತರ ಚೀಟಿದಾರರ ಬಯೋಮೆಟ್ರಿಕ್ ದೃಢೀಕರಣ ಅಥವಾ ಒಟಿಪಿ ಆಧಾರದಲ್ಲಿ ವಿತರಿಸಲಾಗುವುದು. ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿದಿನ ನಿರ್ದಿಷ್ಟ ಸಂಖ್ಯೆಯ ಪಡಿತರ ಚೀಟಿದಾರರಿಗೆ ಪಡಿತರ ವಿತರಿಸಲು ಅವಕಾಶವಿರುತ್ತದೆ.
ಪಡಿತರ ಚೀಟಿದಾರರು ಮುಖಗವಸು ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಪಾಡಬೇಕು ಎಂದು ಜಿಲ್ಲಾಧಿಕಾರಿ ಮಾಲಪಾಟಿ ಅವರು ತಿಳಿಸಿದ್ದಾರೆ.
ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳು 1ನೇ ತಾರಿಖಿನಿಂದ 30 ಅಥವಾ 31ನೇ ತಾರೀಖಿನ ಒಳಗಾಗಿ ಪಡಿತರ ವಸ್ತುಗಳನ್ನು ವಿತರಣೆ ಮಾಡದಿದ್ದಲ್ಲಿ ಆಹಾರ ಇಲಾಖೆಯ ಶುಲ್ಕ ರಹಿತ ದೂ.ಸಂ:1967 ಅಥವಾ 1800-425-9339 ಸಂಖ್ಯೆಗಳಿಗೆ ಕರೆ ಮಾಡಿ ದೂರು ಸಲ್ಲಿಸಬಹುದು.
ಪಡಿತರ ವಿತರಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ಪಡಿತರ ಚೀಟಿದಾರರು ಆಯಾ ತಾಲೂಕಿನ ತಹಶೀಲ್ದಾರ್/ಸಹಾಯಕ ನಿರ್ದೇಶಕರು,ಆಹಾರ ಶಿರಸ್ತೇದಾರ,ಆಹಾರ ನಿರೀಕ್ಷಕರಿಗೆ ಸಲ್ಲಿಸಬಹುದು.
ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಜಂಟಿ ನಿರ್ದೇಶಕರ ಕಾರ್ಯಾಲಯ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಜಿಲ್ಲಾಧಿಕಾರಿಗಳ ಕಚೇರಿ ಬಳ್ಳಾರಿ ಇವರಿಗೆ ದೂ.ಸಂ:08392-272557ಗೆ ನೀಡಬಹುದು.